ಅನಧಿಕೃತ ಶಾಲೆಯ ಮಾನ್ಯತೆ ರದ್ದು ಮಾಡಿ: ಶಿಕ್ಷಣ ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸ್ಸು
ಬೆಂಗಳೂರು, ಜೂ.9: ಸರಕಾರದ ಸ್ಥಳಾಂತರದ ಅನುಮತಿಯಿಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಬೆಂಗಳೂರಿನ ಚೋಳೂರು ಪಾಳ್ಯದಲ್ಲಿರುವ ಶ್ರೀ ಶ್ವೇತಾ ಪಬ್ಲಿಕ್ ಶಾಲೆ(ಸೇಂಟ್ ಮಿರಾಸ್ ಪಬ್ಲಿಕ್ ಸ್ಕೂಲ್)ಯ ಮಾನ್ಯತೆಯನ್ನು ರದ್ದು ಮಾಡಿ ಕಾನೂನು ರೀತಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಶಿಕ್ಷಣ ಸಚಿವರಿಗೆ ಶಿಫಾರಸ್ಸು ಮಾಡಿದ್ದಾರೆ.
ಚೋಳೂರು ಪಾಳ್ಯದಲ್ಲಿನ ಶ್ವೇತಾ ಪಬ್ಲಿಕ್ ಶಾಲೆಯು ಅನುದಾನರಹಿತ ಆಂಗ್ಲಮಾಧ್ಯಮ ಶಾಲೆಯಾಗಿದ್ದು, ಶಿಕ್ಷಣ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ಬೇರೊಂದು ಸ್ಥಳದಲ್ಲಿ ಅನುಮತಿಯಿಲ್ಲದೆ ಅನಧಿಕೃತ ಕಟ್ಟಡದಲ್ಲಿ ನಡೆಸುತ್ತಿರುವುದರಿಂದ ಈ ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿತ್ತು.
ಅಲ್ಲದೆ, ಶಾಲೆಯ ಸ್ಥಳಾಂತರದ ಬಗ್ಗೆ ಪರಿಶೀಲಿಸಿ ವರದಿ ನೀಡಲು ತ್ರಿಸದಸ್ಯ ಸಮಿತಿಯೊಂದನ್ನು ರಚಿಸುವಂತೆಯೂ ತಿಳಿಸಲಾಗಿತ್ತು. ಆದರೆ ಸಮಿತಿಯು ಶ್ವೇತಾ ಪಬ್ಲಿಕ್ ಶಾಲೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಕ್ಷೇಪಣೆಗೆ ಸಂಬಂಧಿಸುವುದಿಲ್ಲ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





