ಲೊಸೋಸೋಮ್ ಕಾಯಿಲೆಗೆ ರಿಯಾಯಿತಿಯಲ್ಲಿ ಔಷಧಿ ನೀಡಲು ಸಾಧ್ಯವೇ?: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು, ಜೂ.9: ಲೈಸೋಸೋಮ್ ಸಮಸ್ಯೆಯಿಂದ(ಎಲ್‍ಎಸ್‍ಡಿ) ಬಳಲುತ್ತಿರುವ ಮಕ್ಕಳಿಗೆ ನೀಡುತ್ತಿರುವ ಔಷಧಿಗೆ ರಿಯಾಯಿತಿ ನೀಡಲು ಸಾಧ್ಯವೇ ಎಂಬುದನ್ನು ತಿಳಿಸುವಂತೆ ಖಾಸಗಿ ಔಷಧ ಪೂರೈಕೆದಾರ ಕಂಪೆನಿಗಳಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಲೈಸೋಸೋಮ್ ಕಾಯಿಲೆಯಿಂದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸರಕಾರಿ ಅನುದಾನಿತ ಸಂಸ್ಥೆ. ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ, ಔಷಧಿಗೆ ಏನಾದರೂ ರಿಯಾಯಿತಿ ನೀಡಬಹುದೇ ಎಂದು ಔಷಧಿ ಕಂಪೆನಿಗಳ ಪರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ತಮ್ಮ ಕಕ್ಷಿದಾರ ಕಂಪೆನಿಗಳ ಬಳಿ ವಿಚಾರಿಸಿ ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಇದೊಂದು ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾಗುವವರಲ್ಲಿ 14 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಇದರ ಪ್ರಾಥಮಿಕ ಚಿಕಿತ್ಸಾ ವೆಚ್ಚವೇ ಸುಮಾರು 20 ಲಕ್ಷಕ್ಕೂ ಮಿಗಿಲಾಗಿದೆ.





