ಪೊಲೀಸ್ ಚಾರ್ಜ್ ಶೀಟ್ ನಲ್ಲಿ ಕಪಿಲ್ ಮಿಶ್ರಾ ಸೇರಿ ಬಿಜೆಪಿ ನಾಯಕರ ದ್ವೇಷ ಭಾಷಣಗಳ ಉಲ್ಲೇಖವೇ ಇಲ್ಲ!
ದಿಲ್ಲಿ ಹಿಂಸಾಚಾರ
ಹೊಸದಿಲ್ಲಿ: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಸಲ್ಲಿಸಲಾದ ಹೊಸ ಚಾರ್ಜ್ ಶೀಟ್ ನಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣಗಳ ಬಗ್ಗೆ ಉಲ್ಲೇಖವಿಲ್ಲದಿರುವುದು ಮತ್ತು ಎಲ್ಲಾ ಆರೋಪಗಳನ್ನು ವಿವಾದಾತ್ಮಕ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಹೊರಿಸಿರುವುದು ಬೆಳಕಿಗೆ ಬಂದಿದೆ.
ಡಿಸೆಂಬರ್ 13ರಿಂದ ಆರಂಭಗೊಂಡು ಫೆಬ್ರವರಿ 25ರವರೆಗೆ ನಡೆದ ಘಟನೆಗಳ ಬಗ್ಗೆ 2,000 ಪುಟಗಳಲ್ಲಿ ಕಾಲಾನುಕ್ರಮದಲ್ಲಿ ಬರೆಯಲಾಗಿದ್ದು, ಆದರೆ ಕಪಿಲ್ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರ ದ್ವೇಷ ಭಾಷಣಗಳ ಬಗ್ಗೆ ಉಲ್ಲೇಖವೇ ಇಲ್ಲದಿರುವುದು ಅಚ್ಚರಿ ಹುಟ್ಟಿಸಿದೆ.
ಪ್ರತಿಭಟನಕಾರರು, ಜಾಮಿಯಾ ಮಿಲ್ಲಿಯಾ ವಿವಿ, ಶಾಹಿನ್ ಭಾಗ್ ನಲ್ಲಿ ಸೇರಿದವರು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದಲ್ಲಿ ಸೇರಿದವರ ಪಾತ್ರದ ಬಗ್ಗೆ ಮಾತ್ರ ಈ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.
ದ್ವೇಷದ ಟ್ವೀಟ್ ಗಳಿಂದ ಕುಖ್ಯಾತಿ ಪಡೆದಿದ್ದ ಕಪಿಲ್ ಮಿಶ್ರಾ ಫೆಬ್ರವರಿ 23ರಂದು ಸಿಎಎ ಪರ ದಿಲ್ಲಿಯ ಮೌಜ್ ಪುರದಲ್ಲಿ ರ್ಯಾಲಿಯೊಂದನ್ನು ನಡೆಸಿದ್ದರು. ಇದೇ ಸ್ಥಳದ ಸಮೀಪದ ಜಾಫ್ರಾಬಾದ್ ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನಕಾರರನ್ನು ತೆರವುಗೊಳಿಸಬೇಕು ಎಂದು ದಿಲ್ಲಿ ಪೊಲೀಸರಿಗೆ ಗಡುವು ನೀಡಿದ್ದ ಕಪಿಲ್ ಮಿಶ್ರಾ ಇಲ್ಲದಿದ್ದರೆ ರಸ್ತೆಗಿಳಿಯುವುದಾಗಿ ಬೆದರಿಕೆ ಹಾಕಿದ್ದರು. ಇದಾಗಿ ಗಂಟೆಗಳ ಬಳಿಕೆ 2 ಗುಂಪುಗಳ ನಡುವೆ ಭಾರೀ ಹಿಂಸಾಚಾರ ನಡೆಯಿತು. ಹಲವು ದಿನಗಳ ಕಾಲ ಮುಂದುವರಿದ ಈ ಹಿಂಸಾಚಾರದಲ್ಲಿ 50 ಮಂದಿ ಮೃತಪಟ್ಟರು. ಇದರಲ್ಲಿ ಹೆಚ್ಚಿನವರು ಮುಸ್ಲಿಮರು.
ಕಪಿಲ್ ಮಿಶ್ರಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತಲ್ಲದೆ, ದ್ವೇಷ ಭಾಷಣ ಮಾಡಿದ ಕಪಿಲ್ ಮಿಶ್ತಾ ಮತ್ತಿತರ ನಾಯಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ದಿಲ್ಲಿ ಹೈಕೋರ್ಟ್ ಪ್ರಶ್ನಿಸಿತ್ತು. ಇದೇ ಸಂದರ್ಭ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು.