ಕೋವಿಡ್-19 ಪರೀಕ್ಷಾ ಮಾನದಂಡಗಳ ವಿಸ್ತರಣೆಗೆ ತಜ್ಞರ ಒತ್ತಾಯ

ಹೊಸದಿಲ್ಲಿ,ಜೂ.9: ದೇಶದ ಕೆಲವು ಭಾಗಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಡುವೆಯೇ ಸಾಂಕ್ರಾಮಿಕ ರೋಗಗಳ ತಜ್ಞರು ಮತ್ತು ವೈದ್ಯರು ಪರೀಕ್ಷಾ ಮಾನದಂಡಗಳನ್ನು ವಿಸ್ತರಿಸುವಂತೆ ಮತ್ತು ಯಾರನ್ನು ಪರೀಕ್ಷೆಗೊಳಪಡಿಸಬೇಕು ಎನ್ನುವುದನ್ನು ನಿರ್ಧರಿಸಲು ವೈದ್ಯರಿಗೆ ಅವಕಾಶ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ರೋಗನಿರ್ಣಯಕ್ಕೆ ಬಳಸಲಾಗುತ್ತಿರುವ ಆರ್‌ಟಿಪಿಸಿಆರ್ ಮತ್ತು ಟಿಆರ್‌ಯುಎನ್‌ಎಎಟಿ ಪರೀಕ್ಷಾ ಸೌಲಭ್ಯಗಳು ಎಲ್ಲ ನೋಂದಾಯಿತ ವೈದ್ಯರು ಶಿಫಾರಸು ಮಾಡುವವರಿಗೂ ದೊರೆಯಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಹೇಳಿಕೆಯನ್ನು ನೀಡಿದ ನಂತರ ಈ ಒತ್ತಾಯ ಕೇಳಿಬಂದಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಾರ್ಗಸೂಚಿಗಳಂತೆ ಅಂತರರಾಷ್ಟ್ರೀಯ ಪ್ರವಾಸದ ಹಿನ್ನೆಲೆಯನ್ನು ಹೊಂದಿರುವ ಲಕ್ಷಣಸಹಿತ ರೋಗಿಗಳು, ಲಕ್ಷಣಗಳೊಂದಿಗಿನ ಪಾಸಿಟಿವ್ ಪ್ರಕರಣಗಳಿಂದ ಹೆಚ್ಚಿನ ಅಪಾಯದಲ್ಲಿರುವ ಸಂಪರ್ಕ ವ್ಯಕ್ತಿಗಳು, ಲಕ್ಷಣಗಳು ಪ್ರಕಟವಾಗಿರುವ ಆರೋಗ್ಯ ಕಾರ್ಯಕರ್ತರು, ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳು ಮತ್ತು ಇನ್‌ಫ್ಲುಯೆಂಜಾದಂತಹ ಅನಾರೋಗ್ಯದೊಂದಿಗೆ ಕೆಂಪು ವಲಯಗಳಲ್ಲಿರುವವರನ್ನು ಮಾತ್ರ ಕೋವಿಡ್-19 ಪರೀಕ್ಷೆಗೊಳಪಡಿಸಬೇಕು.
ದೇಶಾದ್ಯಂತ, ವಿಶೇಷವಾಗಿ ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ಹರ್ಯಾಣದಂತಹ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇದಿಷ್ಟೇ ಸಾಲುವುದಿಲ್ಲ ಎಂದು ತಜ್ಞರು ಬೆಟ್ಟುಮಾಡಿದ್ದಾರೆ.
ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಅಂಕಿಅಂಶಗಳಂತೆ ದಿಲ್ಲಿ ಈಗ ಶೇ.23ಕ್ಕೂ ಹೆಚ್ಚಿನ ಪಾಸಿಟಿವಿಟಿ ದರವನ್ನು ಹೊಂದಿದ್ದು,ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ. ಅಂದರೆ ದಿಲ್ಲಿಯಲ್ಲಿ ಕೊರೋನ ವೈರಸ್ ಪರೀಕ್ಷೆಗೊಳಪಡುವ ಪ್ರತಿ 100 ಜನರಲ್ಲಿ 23 ಜನರ ವರದಿಗಳು ಪಾಸಿಟಿವ್ ಆಗಿರುತ್ತವೆ. ಆದರೆ ಸೌಮ್ಯ ಲಕ್ಷಣಗಳನ್ನು ಹೊಂದಿರುವವರನ್ನು ಪರೀಕ್ಷೆಗೊಳಪಡಿಸದಂತೆ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳಿಗೆ ಸೂಚಿಸುವ ಮೂಲಕ ದಿಲ್ಲಿ ಸರಕಾರವು ಸುದ್ದಿಯಲ್ಲಿದೆ.
ಶೇ.20ಕ್ಕೂ ಕೊಂಚ ಹೆಚ್ಚಿನ ಪಾಸಿಟಿವಿಟಿ ದರವನ್ನು ಹೊಂದಿರುವ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದರೆ,ದೇಶಾದ್ಯಂತ ಈ ದರವು ಕೆಲವೇ ದಿನಗಳಲ್ಲಿ ಶೇ.7ಕ್ಕೆ ಏರಿಕೆಯಾಗಿದೆ.
ತ್ವರಿತವಾಗಿ ಹೆಚ್ಚುತ್ತಿರುವ ಪಾಸಿಟಿವಿಟಿ ದರ ವಿನಾಶಕಾರಿಯಾಗಬಹುದು,ಹೀಗಾಗಿ ಪರೀಕ್ಷಾ ಮಾನದಂಡಗಳನ್ನು ವಿಸ್ತರಿಸಲು ಇದು ಸಕಾಲವಾಗಿದೆ,ಅವುಗಳನ್ನು ನಿರ್ಬಂಧಿಸಲಲ್ಲ ಎಂದು ಗಾಝಿಯಾಬಾದ್‌ನ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಅನುಪಮ ಸಿಂಗ್ ಹೇಳಿದರು.
ಭಾರತದಲ್ಲಿ ಈವರೆಗೆ 49,16,116 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಮತ್ತು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸರಾಸರಿ 1.4 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ,ಆದರೆ ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದು ಎಲ್ಲೂ ಸಾಲುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.