ಅಮಿತ್ ಶಾ ರ‌್ಯಾಲಿಗೆ ಅನ್ವಯಿಸದ ನಿಯಮ ಡಿಕೆಶಿಯ ಪದಗ್ರಹಣ ಸಮಾರಂಭಕ್ಕೆ ಮಾತ್ರ ಯಾಕೆ ?
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಜೂ.9: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜೂ.14ರಂದು ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲು ಆಯೋಜಿಸಲಾಗಿರುವ ‘ಪ್ರತಿಜ್ಞಾ’ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅವಕಾಶ ನಿರಾಕರಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೆಪಿಸಿಸಿಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ. ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. #ಬಿಜೆಪಿ ದುರಾಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ‌್ಯಾಲಿ ನಡೆಸುವಾಗ ಅನ್ವಯ ಆಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಮಾತ್ರ ಅನ್ವಯ ಆಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕು. ಬಿಜೆಪಿಯವರು ಎಂತಹಾ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರು, ಕಾನೂನಿನ ಅಡಿಯಲ್ಲೇ ಕಾರ್ಯಕ್ರಮ ಮಾಡಲಿದ್ದೇವೆ. #ಬಿಜೆಪಿ_ದುರಾಡಳಿತ ಎಂದು ಟ್ವೀಟ್ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ 150 ಜನ ಪ್ರಮುಖರ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಜೂ.14ರಂದು ಪದಗ್ರಹಣ ನಡೆಸಲು ಅವಕಾಶ ಕೋರಿ ಜೂ.5ರಂದು ಮುಖ್ಯಮಂತ್ರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿರುವ ರಾಜ್ಯ ಸರಕಾರ ಪದಗ್ರಹಣ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದೆ.
ಕೆಪಿಸಿಸಿಯ ನೂತನ ಅಧ್ಯಕ್ಷರಾದ @DKShivakumar ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ. ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. 1/3#ಬಿಜೆಪಿ_ದುರಾಡಳಿತ
— Siddaramaiah (@siddaramaiah) June 9, 2020







