ಅಮೆರಿಕ ಸಂಸತ್ತಿನಲ್ಲಿ ಮಂಡಿಯೂರಿದ ಪ್ರತಿಪಕ್ಷ ಸಂಸದರು: ಜಾರ್ಜ್ ಫ್ಲಾಯ್ಡ್ ಗೆ ಶ್ರದ್ಧಾಂಜಲಿ
ವಾಶಿಂಗ್ಟನ್, ಜೂ. 9: ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸಂಸದರು ಸೋಮವಾರ ಮಂಡಿಯೂರುವ ಮೂಲಕ ಪೊಲೀಸರ ಕಸ್ಟಡಿಯಲ್ಲಿ ಸಾವಿಗೀಡಾಗಿರುವ ಕರಿಯ ವರ್ಣೀಯ ಜಾರ್ಜ್ ಫ್ಲಾಯ್ಡ್ ಗೆ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ, ಪೊಲೀಸರ ಕೈಯಲ್ಲಿ ಕರಿಯ ವರ್ಣೀಯರು ಹೆಚ್ಚಾಗಿ ಸಾಯುವುದನ್ನು ತಡೆಯುವ ಉದ್ದೇಶದ ಅಮೂಲಾಗ್ರ ಪೊಲೀಸ್ ಸುಧಾರಣೆ ಪ್ರಸ್ತಾವಗಳನ್ನು ಮಂಡಿಸಿದರು.
ಸಂಸತ್ತಿನ ‘ಎಮಾನ್ಸಿಪೇಶನ್ ಹಾಲ್’ನಲ್ಲಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ನಾಯಕ ಚಕ್ ಶಮರ್ ಸೇರಿದಂತೆ 20ಕ್ಕೂ ಅಧಿಕ ಸಂಸದರು ಮಂಡಿಯೂರಿ ಕುಳಿತು ಫ್ಲಾಯ್ಡ್ ಗೆ ಗೌರವ ಸಲ್ಲಿಸಿದರು. 18ನೇ ಶತಮಾನದಲ್ಲಿ ಸಂಸತ್ತು ಕಟ್ಟಡದ ನಿರ್ಮಾಣದಲ್ಲಿ ಆಫ್ರಿಕಾ ಖಂಡಗಳಿಂದ ಬೆದರಿಸಿ ಕರೆತರಲಾದ ಕರಿಯ ವರ್ಣೀಯರು ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ, ಅವರ ಗೌರವಾರ್ಥವಾಗಿ ಸಂಸತ್ತಿನ ಒಂದು ಹಾಲ್‌ಗೆ ‘ಎಮಾನ್ಸಿಪೇಶನ್ ಹಾಲ್’ ಎಂಬುದಾಗಿ ಹೆಸರಿಡಲಾಗಿದೆ.
ಅವರು 8 ನಿಮಿಷ 46 ಸೆಕೆಂಡ್‌ಗಳ ಕಾಲ ಮಂಡಿಯೂರಿದರು. ಮಿನಪೊಲಿಸ್ ನಗರದಲ್ಲಿ ಮೇ 25ರಂದು ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು 46 ವರ್ಷದ ಫ್ಲಾಯ್ಡ್ ಗೆ ಕೈಕೋಳ ತೊಡಿಸಿ ನೆಲಕ್ಕೆ ಕೆಡವಿದ ಬಳಿಕ ಅವರ ಕುತ್ತಿಗೆಯ ಮೇಲೆ ಇಷ್ಟೇ ಹೊತ್ತು ಮಂಡಿಯೂರಿ ಕುಳಿತಿದ್ದರು. ಆ ಹೊತ್ತಿಗೆ ಫ್ಲಾಯ್ಡ್ ರ ಉಸಿರಾಟ ನಿಂತಿತ್ತು.
ನಾವು ಪ್ರಸ್ತಾಪಿಸಿರುವ ಮಸೂದೆಯು ಅರ್ಥಪೂರ್ಣ ಸುಧಾರಣೆಗಳನ್ನು ಹೊಂದಿದೆ ಹಾಗೂ ಪ್ರತಿಯೊಬ್ಬ ಅಮೆರಿಕನ್ ಪ್ರಜೆಯ ಸುರಕ್ಷತೆ ಮತ್ತು ಸಮಾನ ನ್ಯಾಯದ ಹಕ್ಕನ್ನು ರಕ್ಷಿಸುತ್ತದೆ ಎಂದು ಪೆಲೋಸಿ ಮತ್ತು ಇತರ ಡೆಮಾಕ್ರಟಿಕ್ ಪಕ್ಷದ ಇತರ ಹಿರಿಯ ನಾಯಕರು ಈ ಸಂದರ್ಭದಲ್ಲಿ ಹೇಳಿದರು.
ಉತ್ತರದಾಯಿತ್ವ ನಿಗದಿಪಡಿಸುವ ಮಸೂದೆ
ಡೆಮಾಕ್ರಟಿಕ್ ಸಂಸದರು ಮಂಡಿಸಿರುವ ಮಸೂದೆಯು ಪೊಲೀಸ್ ದೌರ್ಜನ್ಯವನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿದೆ, ತಪ್ಪಿತಸ್ಥ ಪೊಲೀಸರನ್ನು ಉತ್ತರದಾಯಿಯಾಗಿಸುತ್ತದೆ ಹಾಗೂ ಪೊಲೀಸ್ ಕಾರ್ಯಾಚರಣೆಯಲ್ಲಿನ ಪಾರದರ್ಶಕತೆಯನ್ನು ಸುಧಾರಿಸುತ್ತದೆ ಎಂದು ಹೇಳಿಕೆಯೊಂದು ತಿಳಿಸಿದೆ.
ಕಾಂಗ್ರೆಸ್‌ನ ಉಭಯ ಸದನಗಳಲ್ಲಿ ಮಂಡಿಸಲಾಗಿರುವ ‘ಜಸ್ಟಿಸ್ ಆ್ಯಂಡ್ ಪೊಲಿಸಿಂಗ್ ಆ್ಯಕ್ಟ್’ ತಪ್ಪಿತಸ್ಥ ಪೊಲೀಸರನ್ನು ಶಿಕ್ಷಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಪೊಲೀಸ ನೇಮಕ ಹಾಗೂ ಅವರಿಗೆ ನೀಡುತ್ತಿರುವ ತರಬೇತಿಯ ಬಗ್ಗೆ ಮರುಪರಿಶೀಲನೆ ನಡೆಸುತ್ತದೆ.







