ರಾಬರ್ಟ್ ಕ್ಲೈವ್ ಪ್ರತಿಮೆ ತೆರವಿಗೆ ಒತ್ತಾಯಿಸಿ ಆನ್ಲೈನ್ ಸಹಿ ಅಭಿಯಾನ

Photo: Twitter | Change.Org
ಲಂಡನ್, ಜೂ. 9: ಪಶ್ಚಿಮ ಇಂಗ್ಲೆಂಡ್ನ ಶ್ರೂಸ್ಬರಿಯಲ್ಲಿರುವ ರಾಬರ್ಟ್ ಕ್ಲೈವ್ ಪ್ರತಿಮೆಯನ್ನು ತೆರವುಗೊಳಿಸುವಂತೆ ಒತ್ತಾಯಿಸುವ ಆನ್ಲೈನ್ ಮನವಿಯೊಂದಕ್ಕೆ ಸೋಮವಾರ ನೂರಾರು ಜನರು ಸಹಿ ಹಾಕಿದ್ದಾರೆ.
ಭಾರತದಲ್ಲಿ ಬ್ರಿಟಿಶ್ ಸಾಮ್ರಾಜ್ಯವನ್ನು ಬಲಪಡಿಸುವಲ್ಲಿ ಕ್ಲೈವ್ ಮಹತ್ವದ ಪಾತ್ರ ವಹಿಸಿದ್ದನು. Change.Org ನಲ್ಲಿ ಪ್ರಕಟಗೊಂಡಿರುವ ಮನವಿಯನ್ನು ಶ್ರಾಪ್ಶೈರ್ ಕೌಂಟಿ ಕೌನ್ಸಿಲ್ಗೆ ಬರೆಯಲಾಗಿದೆ. ಗುಲಾಮರ ವ್ಯಾಪಾರಿ ಎಡ್ವರ್ಡ್ ಕೋಲ್ಸ್ಟನ್ನ ಬ್ರಿಸ್ಟಲ್ನಲ್ಲಿರುವ ಪ್ರತಿಮೆಯನ್ನು ರವಿವಾರ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಮತ್ತು ಜನಾಂಗೀಯ ತಾರತಮ್ಯ ವಿರೋಧಿ ಹೋರಾಟಗಾರರು ಉರುಳಿಸಿ ಸಮೀಪದ ನದಿಗೆ ಎಳೆದುಕೊಂಡು ಹೋಗುವ ನಾಟಕೀಯ ದೃಶ್ಯಗಳು ಹೊರಬಿದ್ದ ಕೆಲವೇ ಗಂಟೆಗಳ ಬಳಿಕ ರಾಬರ್ಟ್ ಕ್ಲೈವ್ ಪ್ರತಿಮೆ ತೆರವಿಗೆ ಮನವಿ ಸಲ್ಲಿಸಲಾಗಿದೆ.
‘‘ಆರಂಭದಲ್ಲಿ ಭಾರತ, ಬಂಗಾಳ ಮತ್ತು ಆಗ್ನೇಯ ಏಶ್ಯದ ಹೆಚ್ಚಿನ ಭಾಗಗಳನ್ನು ಬ್ರಿಟಿಶ್ ವಸಾಹತುಗಳನ್ನಾಗಿ ಮಾಡುವಲ್ಲಿ ರಾಬರ್ಟ್ ಕ್ಲೈವ್ ಪ್ರಮುಖ ಪಾತ್ರ ವಹಿಸಿದ್ದನು’’ ಎಂದು ಮನವಿಯಲ್ಲಿ ಹೇಳಲಾಗಿದೆ.
ಮನವಿಗೆ 2,500 ಸಹಿಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಕೆಲವೇ ಗಂಟೆಗಳಲ್ಲಿ 1,700ಕ್ಕೂ ಅಧಿಕ ಸಹಿಗಳು ಬಿದ್ದಿವೆ.





