ಎಸೆಸೆಲ್ಸಿ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸಲಿ: ಬೋಜೆಗೌಡ

ಉಡುಪಿ, ಜೂ.9: ಕೋವಿಡ್-19 ಪ್ರಕರಣ ಅವ್ಯಾಹತವಾಗಿ ಹರಡುತ್ತಿ ರುವ ಈ ಸನ್ನಿವೇಶದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದ್ದು, ಅದನ್ನು ಸಮಗ್ರವಾಗಿ ನಿರ್ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸುವಂತಾಗಬೇಕು ಎಂದು ನೈರುತ್ಯ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.
ಜೂ.8ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಇಲಾಖಾಧಿಕಾರಿಗಳ ಶಿಕ್ಷಕರ ಸಭೆಯಲ್ಲಿ ಅವರು ಎಸೆಸಲ್ಸಿ ಪೂರ್ವ ತಯಾರಿ ಕುರಿತು ಮಾತನಾಡುತಿದ್ದರು. ಮಕ್ಕಳ ರಕ್ಷಣೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧನಾಗಿರುತ್ತೇನೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಂಜ, ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವ ಮಕ್ಕಳು ಹಾಗೂ ಕೊಠಡಿ ಮೇಲ್ವಿಚಾರಕರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪರೀಕ್ಷಾ ಮಂಡಳಿಯ ಸದಸ್ಯ ಕೆ.ಕಿರಣ್ ಹೆಗ್ಡೆ ಪರೀಕ್ಷೆ ಹಾಗೂ ಮೌಲ್ಯಮಾಪನದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಮಂಗಳೂರು ಸಿಟಿಇ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೋ ಪರೀಕ್ಷೆಯನ್ನು ಎದುರಿಸುವಾಗ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಉಮಾ ವಂದಿಸಿದರು.







