ಸೋಂಕಿತರ ಮನೆಯಿಂದ ಹಾಲು ಖರೀದಿಗೆ ಡೈರಿಗಳ ಹಿಂದೇಟು: ಸಿಪಿಎಂ ಆರೋಪ
ಬೈಂದೂರು, ಜೂ.9: ಕೊರೋನ ಸೊಂಕಿತರ ಮನೆ ಎಂಬ ನೆಪವೊಡ್ಡಿ ಅವರ ಮನೆಯಿಂದ ಹಾಲು ಖರೀದಿಸುವುದನ್ನು ಸ್ಥಳೀಯ ಡೈರಿಗಳು ನಿಲ್ಲಿಸಿದ್ದು, ಇದ ರಿಂದ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ಸಿಪಿಐಎಂ ಬೆಂದೂರು ವಲಯ ಸಮಿತಿ ಆರೋಪಿಸಿದೆ.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಹೊರರಾಜ್ಯಗಳಿಂದ ಬಂದ ಹಲವರಿಗೆ ಕರೋನಾ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೇನ್ ನಂತರ ಮನೆಗೆ ಕಳುಹಿಸಿ ಮನೆಯ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ನಾಡ - ಪಡುಕೋಣೆ ಪ್ರದೇಶದ ಸುಮಾರು 10 ಮನೆಗಳಲ್ಲಿ ದಿನ ನಿತ್ಯ ದನಗಳ ಹಾಲು ಮಾರಾಟ ಮಾಡಿ ಬದುಕುವ ಕುಟುಂಬಗಳಿವೆ. ಕೊರೋನ ಸೊಂಕಿತರ ಮನೆ ಎಂಬ ನೆಪವೊಡ್ಡಿ ಅವರ ಮನೆಯಿಂದ ಹಾಲು ಖರೀದಿಸುವುದನ್ನು ಸ್ಥಳೀಯ ಡೈರಿಗಳು ನಿಲ್ಲಿಸಿವೆ. ಇದರಿಂದಾಗಿ ಆ ಕುಟುಂಬಗಳಿಗೆ ಪ್ರತಿ ದಿನ 200ರೂ.ನಿಂದ 1500ರೂ.ವರೆಗೆ ನಷ್ಟ ಆಗುತ್ತಿದೆ.
ಈ ಕುರಿತು ಸ್ಥಳೀಯ ಆಡಳಿತದ ಗಮನಕ್ಕೆ ತಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಪ್ರತಿದಿನ ಗೋವಿನ ಹೆಸರಲ್ಲಿ ರಾಜಕೀಯ ಮಾಡುವ ಸ್ಥಳೀಯ ಬಿಜೆಪಿ ಶಾಸಕರು, ಹಾಲು ಮಾರಾಟ ಮಾಡುವವರ ಸಹಾಯಕ್ಕೆ ಬರಲಿಲ್ಲ. ಸೀಲ್ಡೌನ್ ಆಗಿರುವ ಕುಟುಂಬಗಳ ಮನೆಯಿಂದ ಹಾಲು ಖರೀದಿ ಮಾಡಲು ವ್ಯವಸ್ಥೆ ಮಾಡಬೇಕು ಅಥವಾ ಪರಿಹಾರ ನೀಡಬೇಕು ಎಂದು ಸಿಪಿಐಎಂ ಒತ್ತಾಯ ಮಾಡುತ್ತದೆ. ಇಲ್ಲದಿದ್ದರೆ ಬೈಂದೂರು ಶಾಸಕರ ಕಛೇರಿ ಮುಂದೆ ಪ್ರತಿಭಟನೆ ನಡೆಸ ಲಾಗುವುದು ಎಂದು ಸಿಪಿಐಎಂ ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







