ಸ್ವರ್ಣ ನದಿಯಲ್ಲಿ ಅಕ್ರಮ ಮರಳು ಸಾಗಾಟ: ಸಮಗ್ರ ತನಿಖೆಗೆ ಆಗ್ರಹ

ಉಡುಪಿ, ಜೂ.9: ಸ್ವರ್ಣಾ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ನಡೆದ ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಬೇಕು ಮತ್ತು ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಿಯೋಗ ಜೂ.8ರಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
ಈ ಪ್ರಕರಣದಲ್ಲಿ ಸಂಬಂಧಪಟ್ಟ ಇಲಾಖೆಗೆ ಇತ್ತೀಚೆಗೆ ಸ್ಥಳಕ್ಕೆ ದಾಳಿ ಮಾಡಿ ಕೆಲವು ವಾಹನಗಳನ್ನು ಮತ್ತು ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡು ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅದೇ ರೀತಿ ಉಡುಪಿ ಜಿಲ್ಲಾಧಿಕಾರಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ, ಮುಖಂಡರಾದ ಪ್ರಸಾದ ಕರ್ಕಡ, ಶಾಹಿದ ಅಲಿ, ಯಜ್ಞೇಶ ಆಚಾರ್ಯ, ರಾಮದಾಸ ಪೈ, ಪ್ರಿತೀಶ ಕುಮಾರ್, ಸಲ್ಮಾನ್ ಅಹ್ಮದ್, ದಿನೇಶರಾಮ, ಶ್ರೇಯಸ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.





