ಆದಾಯಕ್ಕಿಂತ ಹೆಚ್ಚಿನ ಆಸ್ತಿ: ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಮಂಗಳೂರು, ಜೂ.9: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದಲ್ಲಿ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯವು ಮಂಗಳವಾರ ಆದೇಶ ಪ್ರಕಟಿಸಿದೆ.
ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜೋಸೆಫ್ ಡೇನಿಸ್ ಮಿರಾಂಡ ಜಾಮೀನು ಅರ್ಜಿ ವಜಾಗೊಂಡ ಆರೋಪಿ.
ಈ ಅಧಿಕಾರಿ ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಆಸ್ತಿಗಳನ್ನು ಹೊಂದಿದ್ದಾರೆಂದು ಆರೋಪದ ಮೇಲೆ 2017ರ ಡಿ.12ರಂದು ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಸುಧೀರ್ ಹೆಗ್ಡೆ ಮತ್ತು ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ದಾಳಿ ನಡೆಸಿದ್ದರು. ಅಧಿಕಾರಿಗಳ ಪರಿಶೀಲನೆ ವೇಳೆ 1.7 ಕೋಟಿಯಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು.
ಬಂಧನದ ಭೀತಿಯಿಂದ ಆರೋಪಿ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ವಜಾಗೊಳಿಸಿ ಆದೇಶಿಸಿದರು.
ಭ್ರಷ್ಟಾಚಾರ ನಿಗ್ರಹದಳದ ಪರ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಆರೋಪಿಯ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಬಿ. ಬಿ. ಜಕಾತಿಯವರು ಆರೋಪಿ ಮಿರಾಂಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.







