ಹೊರರಾಜ್ಯದಿಂದ ಉಳ್ಳಾಲಕ್ಕೆ ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ: ಯುಟಿ ಖಾದರ್

ಮಂಗಳೂರು, ಜೂ.9: ಹೊರ ರಾಜ್ಯದಿಂದ ಮಂಗಳೂರು ವಿಧಾನಸಭಾ ಕ್ಷೇತ್ರ(ಉಳ್ಳಾಲ)ಕ್ಕೆ ಬರುವವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ನಾವೇ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಾಜ್ಯದಿಂದ ಬರುವವರಿಗೆ ನೇರವಾಗಿ ಮನೆಗೆ ಕಳುಹಿಸಿದರೆ, ಸೋಂಕು ಹರಡುವ, ಆ ಪ್ರದೇಶ ಸೀಲ್‌ಡೌನ್ ಮಾಡುವ ಅಪಾಯವಿದೆ. ಅಲ್ಲದೆ, ಅಕ್ಕಪಕ್ಕದ ಮನೆಯವರು ದೂರ ಇಟ್ಟು, ಅನಗತ್ಯ ವೈಮನಸ್ಯಕ್ಕೂ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ಬೆಳ್ಮ ಗ್ರಾಮ ಪಂಚಾಯತ್‌ನ್ನು ನೋಡೆಲ್ ಗ್ರಾಪಂ ಆಗಿ ರೂಪಿಸಿದ್ದು, ಪಿಡಿಒ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಕ್ಷೇತ್ರಕ್ಕೆ ಯಾವ ರಾಜ್ಯದವರೂ ಬರಬಹುದು. ನಾವು ಯಾರನ್ನೂ ತಡೆಯುವುದಿಲ್ಲ. ಬಂದವರು ಬೆಳ್ಮ ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿ, ಅವರು ಸೂಚಿಸುವ ಸರಕಾರಿ ಹಾಸ್ಟೆಲ್ ಅಥವಾ ಶಾಲೆಯಲ್ಲಿ ಏಳು ದಿನ ಇದ್ದು ಹೋಗಬೇಕು. ಅಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆ. ಬಂದವರಿಗೆ ಅವರ ಮನೆಯವರೇ ಊಟದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರಕಾರ ಕ್ವಾರಂಟೈನ್ ಇಲ್ಲ ಎನ್ನುವುದೇತಕೆ ? ಆರಂಭದಲ್ಲಿ 10 ಸಾವಿರ ಬೆಡ್ ಇದೆ, ರೈಲಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದೇವೆ ಎಂದೆಲ್ಲ ಹೇಳಿದರಲ್ಲಾ, ಅದೆಲ್ಲ ಎಲ್ಲಿಗೆ ಹೋಗಿದೆ? ರ್ಯಾಪಿಡ್ ಟೆಸ್ಟ್ ಮಾಡಲು ಅಡ್ಡಿ ಏನು? 10 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಹಿಂದೆ ಕಳುಹಿಸಿದ ನಂತರ ಯಾಕೆ ತನಿಖೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಲಾಕ್‌ಡೌನ್ ಮುಗಿದು, ಎಲ್ಲ ಉದ್ಯಮ, ಕಚೇರಿಗಳು ತೆರೆದುಕೊಂಡರೂ, ಪಡಿತರ ಚೀಟಿಗಾಗಿ ಅರ್ಜಿ ಹಾಕುವ ಕಚೇರಿ ಮಾತ್ರೆ ತೆರೆದು ಕೊಂಡಿಲ್ಲ. ಇದರಿಂದ ಆಸ್ಪತ್ರೆ ಸೌಲಭ್ಯ ಪಡೆಯುವ ಬಡ ರೋಗಿಗಳಿಗೆ ಅನ್ಯಾಯವಾಗುತ್ತಿದೆ. ಕೊರೋನ ಸಾವಿನಂತೆ, ಇತರ ಕಾಯಿಲೆಗಳಿಂದ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಬಗ್ಗೆಯೂ ಆರೋಗ್ಯ ಸಚಿವರು ಮಾಹಿತಿ ಕೊಡಬೇಕು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮೋನು, ಸುರೇಶ್ ಭಟ್ನಗರ, ಎನ್.ಎಸ್.ಕರೀಂ, ಉಮರ್ ಫಾರೂಕ್ ಪಜೀರ್, ಸಿದ್ದೀಕ್ ಮತ್ತಿತರರು ಉಪಸ್ಥಿತರಿದ್ದರು.
‘ಮಾರ್ಕೆಟ್ ನಿರ್ವಹಣೆ; ಜಿಲ್ಲಾಡಳಿತ ವಿಫಲ’
ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ವ್ಯವಹಾರವನ್ನು ಕೊರೋನ ಹರಡುವ ಭೀತಿಯಿಂದ ರಾತೋರಾತ್ರಿ ಸಭೆ ನಡೆಸಿ, ತಾತ್ಕಾಲಿಕವಾಗಿ ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ. ಈಗ ಲಾಕ್‌ಡೌನ್ ಮುಗಿದು, ಮತ್ತೆ ಹಿಂದಕ್ಕೆ ಬರಲು ಅವಕಾಶ ಕೊಡುತ್ತಿಲ್ಲ. ಮಾರ್ಕೆಟ್ ನಿರ್ವಹಣೆಯಲ್ಲಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸಹಿತ ಜಿಲ್ಲಾಡಳಿತ ಸಂಪೂರ್ಣ ವಿಲವಾಗಿದೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಶಾಶ್ವತ ಸ್ಥಳಾಂತರ ಬಗ್ಗೆ ಮಹಾನಗರ ಪಾಲಿಕೆ ಯಾವುದೇ ಲಿಖಿತ ಆದೇಶ ನೀಡಿಲ್ಲ. ಸಂಬಂಧಪಟ್ಟವರು ತಕ್ಷಣ ಸಭೆ ಕರೆದು, ಸ್ಪಷ್ಟನೆ ನೀಡಿ, ವ್ಯಾಪಾರಿಗಳಿಗೂ, ಗ್ರಾಹಕರಿಗೂ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.







