ಆ್ಯಂಬುಲೆನ್ಸ್ ಚಾಲಕರಿಗೆ ಅವಮಾನ : ದೂರು
ಮಂಗಳೂರು, ಜೂ. 9: ಸುಳ್ಯದಿಂದ ರೋಗಿಯೊಬ್ಬರನ್ನು ವೆನ್‌ಲಾಕ್ ಆಸ್ಪತ್ರೆಗೆ ಕರೆತರುವ ವೇಳೆ ಖಾಸಗಿ ಆ್ಯಂಬುಲೆನ್ಸ್‌ನ ಚಾಲಕರಿಗೆ ಫಳ್ನೀರ್ ಸಮೀಪದ ಅಂಗಡಿಯೊಂದರ ಮಾಲಕ ಅವಮಾನ ಮಾಡಿದ್ದಾರೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
‘‘ಶ್ರೀಗಣೇಶ್ ಆ್ಯಂಬುಲೆನ್ಸ್‌ನ ಚಾಲಕರೊಬ್ಬರು ಜೂನ್ 6ರಂದು ಸುಳ್ಯದಿಂದ ರೋಗಿಯೊಬ್ಬರನ್ನು ಕರೆತರಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ್ಯಂಬುಲೆನ್ಸ್‌ನಲ್ಲಿ ಅವರ ಇಬ್ಬರು ಪುಟ್ಟ ಮಕ್ಕಳಿದ್ದರು. ಅವರಿಗೆ ನೀರು ಮತ್ತು ಬಿಸ್ಕೆಟ್‌ಗಾಗಿ ಫಳ್ನೀರ್ ಸಮೀಪದ ಅಂಗಡಿಯೊಂದಕ್ಕೆ ನಮ್ಮ ಚಾಲಕ ಹೋದಾಗ ಆ ಅಂಗಡಿಯ ಮಾಲಕ ತುಚ್ಛವಾಗಿ ಮಾತನಾಡಿದ್ದಾರೆ. ನೀವು ಆ್ಯಂಬುಲೆನ್ಸ್ ಚಾಲಕರು ಅಂಗಡಿಗೆ ಬರುವುದು ಬೇಡ. ನೀವು ಕೊರೋನ ತರುತ್ತೀರಿ. ನಿಮಗೆ ಸರಕಾರದಿಂದ ಎಲ್ಲಾ ಸೌಲಭ್ಯ ಇದೆ ಎಂದು ಹೇಳಿರುವುದಲ್ಲದೆ ನೀರು ಬಿಸ್ಕೆಟ್‌ಗಾಗಿ ಇಟ್ಟ ಹಣವನ್ನೂ ಬಿಸಾಕಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’’ ಎಂದು ಆಸಿಫ್ ಎಂಬವು ದೂರಿದ್ದಾರೆ.
‘‘ನಮ್ಮ ಚಾಲಕರಿಗೆ ಮಾಡಿರುವ ಅವಮಾನದ ಬಗ್ಗೆ ನಾನು ಮಧ್ಯಾಹ್ನ ಹೋಗಿ ಅಂಗಡಿಯಲ್ಲಿ ಮಾತನಾಡಿದಾಗಲೂ ಅದೇ ಅನುಭವ ಆಗಿದೆ. ನಾವು ಆ್ಯಂಬುಲೆನ್ಸ್ ಚಾಲಕರಾಗಿ ಸರಕಾರಕ್ಕೆ ಹೆಗಲು ಕೊಟ್ಟು ನಾವೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಕರೆ ಬಂದಾಗ ಅವರಿಗೆ ಯಾವ ರೋಗ ಇದೆ ಎಂದು ನಾವು ತಿಳಿಯಲು ಹೋಗುವುದಿಲ್ಲ. ಬದಲಾಗಿ ಆ ರೋಗಿಯ ಪ್ರಾಣ ರಕ್ಷಣೆಯೇ ನಮ್ಮ ಪ್ರಮುಖ ಕರ್ತವ್ಯವಾಗಿರುತ್ತದೆ. ಯಾವುದೇ ಹೊತ್ತಿನಲ್ಲಿ, ನಮ್ಮ ಪ್ರಾಣದ ಹಂಗನ್ನೂ ತೊರೆದು ನಾವು ಕರ್ತವ್ಯ ನಿರ್ವಹಿಸುತ್ತೇವೆ. ಕೊರೋನ ಸಂದರ್ಭದಲ್ಲೂ ನಮಗೆ ಸರಕಾರದಿಂದ ಯಾವುದೇ ರೀತಿಯ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಸಿಗದಿದ್ದರೂ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಲಾಕ್‌ಡೌನ್ ಸಂದರ್ಭಲ್ಲೂ ನಮ್ಮ ಮಾಲಕರ ಮೂಲಕ ನಮ್ಮ ಚಾಲಕರಿಗೆ ಮಾತ್ರವಲ್ಲದೆ, ಇತರರಿಗೂ ನಾವು ಸಹಾಯ ಹಸ್ತ ನೀಡಿದ್ದೇವೆ. ಹಾಗಿರುವಾಗ ನಮ್ಮನ್ನು ಈ ರೀತಿ ತುಚ್ಛವಾಗಿ ಕಾಣುವ ಬಗ್ಗೆ ಬೇಸರವಿದೆ. ನಾವು ಮನುಷ್ಯರೇ’’ ಎಂದು ಆಸಿಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಈ ರೀತಿ ಸಮಾಜದಲ್ಲಿ ಆ್ಯಂಬುಲೆನ್ಸ್ ಚಾಲಕರ ಬಗ್ಗೆ ತುಚ್ಛವಾದ ಮನೋಭಾವ ಇರಬಾರದು. ಇಂತಹ ವರ್ತನೆ ಪುನರಾವರ್ತನೆ ಆಗಬಾರದೆಂಬ ಕಾರಣಕ್ಕೆ ನಾವು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ’’ ಎಂದು ಶ್ರೀ ಗಣೇಶ್ ಆ್ಯಂಬುಲೆನ್ಸ್ ಮಾಲಕ ಗಂಗಾಧರ್ ತಿಳಿಸಿದ್ದಾರೆ.







