ಕೊರೋನ ಚಿಕಿತ್ಸೆ ಪಡೆಯುವವರಿಗೆ ಶುಲ್ಕ ನಿಗದಿ

ಬೆಂಗಳೂರು, ಜೂ.9: ಕೋವಿಡ್–19ಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಶುಲ್ಕ ನಿಗದಿಪಡಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಸಮಿತಿ ಸಭೆ ನಡೆಸಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ಎಬಿ–ಎಆರ್‍ಕೆ) ಕಾರ್ಡ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್‍ದಾರರಷ್ಟೇ ಶುಲ್ಕ ಪಡೆಯಬೇಕು ಹಾಗೂ ಸಾಮಾನ್ಯ ರೋಗಿಗಳ ವೆಚ್ಚವನ್ನು ಶೇ. 20ರಷ್ಟು ತಗ್ಗಿಸಬೇಕು ಎಂದು ತಿಳಿಸಿದೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಇತರ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿರುವ ದರಕ್ಕಿಂತ ಅಧಿಕ ದರವನ್ನು ರಾಜ್ಯದಲ್ಲಿ ನಿಗದಿಪಡಿಸಿರುವುದನ್ನು ಗಮನಿಸಿ ಈ ಸೂಚನೆ ನೀಡಿತು.
ಜನರಲ್ ವಾರ್ಡ್ ಶುಲ್ಕವನ್ನು ಖಾಸಗಿಯವರು ನಿಗದಿಪಡಿಸಿದ 15 ಸಾವಿರದ ಬದಲಿಗೆ 12 ಸಾವಿರ, ಆಮ್ಲಜನಕ ಇರುವ ವಾರ್ಡ್ ದರ 20 ಸಾವಿರದ ಬದಲಿಗೆ 15 ಸಾವಿರ, ಐಸಿಯು ವಾರ್ಡ್ ದರ 25 ಸಾವಿರದ ಬದಲಿಗೆ 20 ಸಾವಿರ ಹಾಗೂ ವೆಂಟಿಲೇಟರ್ ಹೊಂದಿರುವ ಐಸಿಯು ವಾರ್ಡ್‍ಗೆ 35 ಸಾವಿರದ ಬದಲಿಗೆ 25 ಸಾವಿರ ದರ ನಿಗದಿಪಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಟಿ.ಅಬ್ರೂ ಅವರು ದರ ನಿಗದಿ ಸಮಿತಿಯ ನೇತೃತ್ವ ವಹಿಸಿದ್ದು, ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ವಿವಿಧ ಆಸ್ಪತ್ರೆಗಳ ಜಿಲ್ಲಾ ಶಸ್ತ್ರಚಿಕಿತ್ಸಕರು ಇದರ ಸದಸ್ಯರು ಎಂದು ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಕಾಳಜಿ ಸಂಘಟನೆಗಳ ಒಕ್ಕೂಟ (ಎಫ್‍ಎಚ್‍ಎಕೆ) ಪ್ರತಿನಿಧಿಸಿತ್ತು. ಇದೀಗ ಶುಲ್ಕ ನಿಗದಿ ಪ್ರಸ್ತಾಪವನ್ನು ಸರಕಾರ ಅಂತಿಮವಾಗಿ ಒಪ್ಪಿಕೊಳ್ಳುವುದು ಬಾಕಿ ಇದೆ.
‘ಕೋವಿಡ್ ರೋಗಿಗಳ ಚಿಕಿತ್ಸೆಗೆ 3.5 ಲಕ್ಷ ಬೇಕು ಎಂದು ಸರಕಾರವೇ ಒಪ್ಪಿಕೊಂಡಿದೆ. ನಾವು ಅದಕ್ಕಿಂತಲೂ ಕಡಿಮೆ ಶುಲ್ಕವನ್ನೇ ನಿಗದಿಪಡಿಸಿದ್ದೇವೆ. ಆದರೂ ಇನ್ನೂ ಶೇ. 20ರಷ್ಟು ಶುಲ್ಕ ಕಡಿತ ಮಾಡಬೇಕೆಂದು ಸರಕಾರ ಏಕೆ ಹೇಳುತ್ತಿದೆಯೋ ಗೊತ್ತಿಲ್ಲ. ನಾವು ಮಾತುಕತೆಗೆ ಸಿದ್ಧ ಇದ್ದೇವೆ’ ಎಂದು ಎಫ್‍ಎಚ್‍ಎಕೆ ಸಂಘಟನೆಯ ಪ್ರಧಾನ ಸಂಚಾಲಕ ಡಾ.ನಾಗೇಂದ್ರ ಸ್ವಾಮಿ ಹೇಳಿದರು.







