ಕಾಪು ತೋಡಿಗೆ ತಡೆಗೋಡೆ ನಿರ್ಮಾಣ ವಿವಾದ

ಕಾಪು : ಕಾಪು ಪಡುಗ್ರಾಮದ ರಾಮನಗರದಲ್ಲಿ ಮಳೆ ನೀರು ಹರಿದು ಹೋಗುವ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಲಾಲಾಜಿ ಆರ್. ಮೆಂಡನ್ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಅವರನ್ನು ಭೇಟಿ ಮಾಡಿದ ಸ್ಥಳೀಯರು ಕಾಮಗಾರಿ ಪರವಹಿಸಿ ಕಾಮಗಾರಿ ಮುಂದುವರಿಸಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಮನವಿ ಮಾಡಿದರು.
ಮೂಳೂರು ತಾವರೆಕೊಳದಿಂದ ಹರಿದು ಬರುವ ನೀರು ರಾಮನಗರ ಕಾಲುವೆಯ ಮೂಲಕವಾಗಿ ಹರಿದು ಸಮುದ್ರ ಸೇರುತ್ತದೆ. ಮಳೆ ನೀರು ಹರಿಯುವ ಮುಖ್ಯ ತೋಡಿನ ಚರಂಡಿಯ ಗಾತ್ರಕ್ಕೆ ಅನುಗುಣವಾಗಿ ಕಾಲುವೆಗೆ ತಡೆಗೋಡೆ ನಿರ್ಮಿಸಲು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸಣ್ಣ ನೀರಾವರಿ ಇಲಾಖೆಯ ಮೂಲಕ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು.
ಸಣ್ಣ ನೀರಾವರಿ ಇಲಾಖೆ ಮತ್ತು ಸ್ಥಳೀಯ ಶಾಸಕರ ಕ್ರಮಕ್ಕೆ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿತ್ತು. ಕಾಲುವೆ ಕಿರಿದಾಗಿಸುವುದರಿಂದ ಮಳೆ ನೀರು ಕೃಷಿ ಗದ್ದೆಗೆ ನುಗ್ಗುವ ಭೀತಿಯಿದೆ ಎಂದು ಆರೋಪಿಸಿದ್ದ ರೈತರು ಸೋಮವಾರ ಕಾಲುವೆಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿದ್ದರು.
ಮಂಗಳವಾರ ಸಂಜೆ ಕಾಮಗಾರಿ ಸ್ಥಗಿತಗೊಂಡ ಪ್ರದೇಶಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶೇಷಕೃಷ್ಣ, ಸಹಾಯಕ ಇಂಜಿನಿಯರ್ ಎಸ್.ಟಿ. ಗೌಡ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಪುರಸಭೆ ಸದಸ್ಯೆ ಮಮತಾ ಕುಶ ಸಾಲ್ಯಾನ್ ಮೊದಲಾದವರ ಜೊತೆಗೂಡಿ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ ಸ್ಥಳೀಯರ ಅಹವಾಲು ಸ್ವೀಕರಿಸಿದರು.
ಕಾಮಗಾರಿಗೆ ಸೊಕರ ಅಸಮಾಧಾನ: ಸ್ಥಳೀಯ ಸಂತ್ರಸ್ತರ ಮನವಿಯ ಮೇರೆಗೆ ವಿವಾದಿತ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸ್ಥಳೀಯ ನಾಗರಿಕರ ಸಮಸ್ಯೆಯನ್ನು ಆಲಿಸಿದರು.
ಸ್ಥಳೀಯ ಕೃಷಿಕರು ಈ ಭಾಗದಲ್ಲಿ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತಾಪಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಶಾಸಕರ ರೈತ ವಿರೋಧಿ ನಿಲುವು ಖಂಡನೀಯ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಜನ ಪ್ರತಿನಿಧಿಗಳು ಜನಪರ ನಿಲುವನ್ನು ಹೊಂದಿರಬೇಕು ವಿನಃ ಸ್ವಾರ್ಥಕ್ಕಾಗಿ ಅಥವಾ ಯಾವುದೋ ಲಾಭಕ್ಕಾಗಿ ಜನರನ್ನು ಬಲಿಪಶು ಮಾಡಬಾರದು. ಕಾಲುವೆ ಅತಿಕ್ರಮಿಸಿ ರಸ್ತೆ ನಿರ್ಮಾಣ ಮಾಡಿದರೆ ಆ ಪರಿಸರದ ಜನರ ಬದುಕು ಏನಾಗಬಹುದೆಂಬ ಯೋಚನೆ ಶಾಸಕರಿಗೆ ಇದ್ದಂತಿಲ್ಲ. ಬಡ ರೈತಾಪಿ ಜನರ ಬದುಕುವ ಹಕ್ಕನ್ನು ಕಸಿದು ಕೊಳ್ಳದೆ, ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸ್ಥಳದಲ್ಲಿ ಪುರಸಭೆಯ ಸದಸ್ಯರಾದ ಕೆ. ಎಚ್.ಉಸ್ಮಾನ್, ಶಾಂತಲತಾ ಎಸ್. ಶೆಟ್ಟಿ, ಅಶ್ವಿನಿ, ಇಮ್ರಾನ್, ನಾಗೇಶ್ ಸುವರ್ಣ, ಮತ್ತು ಸ್ಥಳೀಯ ಕೃಷಿಕರಾದ ಶೇಖರ್ ಶೆಟ್ಟಿ, ರಘುರಾಮ ಶೆಟ್ಟಿ, ಸುಗಂಧಿ ರೈ, ಸಂತೋಷ್ ಶೆಟ್ಟಿ, ಅಶೋಕ್ ಶೆಟ್ಟಿ, ಸುವಾಸಿನಿ, ಸುರೇಶ್ ಪೂಜಾರಿ, ಗೀತಾ ಶೆಟ್ಟಿ, ಸರೋಜಿನಿ, ವಿಜಯಾ, ಪೂರ್ಣಿಮಾ, ಕೃಷ್ಣ ಆಚಾರಿ, ಮತ್ತು ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.








