‘ಕಮಲ್ ನಾಥ್ ಸರಕಾರ ಬೀಳಿಸಿದ್ದು ಬಿಜೆಪಿಯ ಕೇಂದ್ರ ನಾಯಕತ್ವ'
ಶಿವರಾಜ್ ಸಿಂಗ್ ಚೌಹಾಣ್ ರದ್ದು ಎನ್ನಲಾದ ಆಡಿಯೋ ವೈರಲ್

ಭೋಪಾಲ್: ಮಧ್ಯ ಪ್ರದೇಶದ ಹಿಂದಿನ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬೀಳಿಸಿದ್ದು ಬಿಜೆಪಿಯ ಕೇಂದ್ರ ನಾಯಕರು ಎಂದು ಈಗಿನ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ನೀಡಿದ್ದಾರೆನ್ನಲಾದ ಹೇಳಿಕೆಯ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಮಾರ್ಚ್ ತಿಂಗಳಲ್ಲಿ ಕಮಲ್ ನಾಥ್ ಸರಕಾರದ ಪತನದ ಹಿಂದೆ ತನ್ನ ಪಾತ್ರವಿಲ್ಲವೆಂದು ಬಿಜೆಪಿ ಹಾಗೂ ಚೌಹಾಣ್ ವಾದಿಸುತ್ತಲೇ ಇದ್ದರು.
ಆಡಿಯೋ ಕ್ಲಿಪ್ ನಲ್ಲಿ ಹಿಂದಿಯಲ್ಲಿ ಚೌಹಾಣ್ ಅವರದ್ದೆಂದು ಹೇಳಲಾದ ದನಿಯೊಂದು “ಸರಕಾರ ಪತನಗೊಳ್ಳಬೇಕು, ಇಲ್ಲದೇ ಇದ್ದರೆ ಎಲ್ಲ ಯೋಜನೆಯೂ ತಲೆಕೆಳಗಾಗುವುದು ಎಂಬ ಕುರಿತು ನಿರ್ಧಾರ ಕೈಗೊಂಡಿದ್ದು ಕೇಂದ್ರ ನಾಯಕತ್ವ. ಹೇಳಿ, ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ತುಳಸಿ ಸಿಲಾವತ್ ಅವರಿಲ್ಲದೇ ಹೋಗಿದ್ದರೆ ಸರಕಾರವನ್ನು ಬೀಳಿಸಲು ಸಾಧ್ಯವಿತ್ತೇ ?, ಬೇರೆ ದಾರಿಯಿರಲಿಲ್ಲ” ಎಂದು ಇಂದೋರ್‍ನ ಸಾನ್ವೆರ್ ಎಂಬಲ್ಲಿ ಚೌಹಾಣ್ ಪಕ್ಷ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದಾರೆನ್ನಲಾಗಿದೆ. ಈ ಪ್ರದೇಶಕ್ಕೆ ಚೌಹಾಣ್ ಕಳೆದ ದಿನವಷ್ಟೇ ಭೇಟಿ ನೀಡಿದ್ದರು.
ಆದರೆ ಈ ವೈರಲ್ ಆಡಿಯೋ ಕ್ಲಿಪ್ ಬಗ್ಗೆ ಸಿಎಂ ಇನ್ನೂ ಪ್ರತಿಕ್ರಿಯಿಸಿಲ್ಲ. ಆಡಿಯೋದಲ್ಲಿ ಹೆಸರಿಸಲಾದ ತುಳಸಿ ಸಿಲಾವತ್ ಅವರು ಸಿಂಧಿಯಾ ಅನುಯಾಯಿಯಾಗಿದ್ದಾರೆ. ಮಾಜಿ ಕಾಂಗ್ರೆಸ್ ಸಚಿವರಾಗಿರುವ ಇವರು ಸಿಂಧಿಯಾ ಅವರೊಂದಿಗೆ ಬಿಜೆಪಿ ಜತೆ ಕೈಜೋಡಿಸಿದವರಲ್ಲಿ ಸೇರಿದ್ದರು.