ಎರಡು ಆನೆಗಳಿಗೆ 5 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿಟ್ಟ ವ್ಯಕ್ತಿ: ಕಾರಣವೇನು ಗೊತ್ತೇ?
ಸಾಂದರ್ಭಿಕ ಚಿತ್ರ
ಪಾಟ್ನಾ: ಪಿಸ್ತೂಲು ಹೊಂದಿದ್ದ ದುಷ್ಕರ್ಮಿಗಳಿಂದ ತನ್ನ ಜೀವವನ್ನು ರಕ್ಷಿಸಿದ ಒಂದು ಆನೆ ಸೇರಿದಂತೆ ಎರಡು ಆನೆಗಳ ಹೆಸರಿನಲ್ಲಿ ಇಲ್ಲಿನ ವ್ಯಕ್ತಿಯೊಬ್ಬರು ರೂ. 5 ಕೋಟಿ ಮೌಲ್ಯದ ತಮ್ಮ ಒಟ್ಟು ಆಸ್ತಿಯ ಅರ್ಧ ಆಸ್ತಿಯನ್ನು ವಿಲ್ ಮಾಡಿದ್ದಾರೆ.
ಏಷ್ಯನ್ ಎಲಿಫೆಂಟ್ ರಿಹ್ಯಾಬಿಲಿಟೇಶನ್ ಎಂಡ್ ವೈಲ್ಡ್ ಲೈಫ್ ಅನಿಮಲ್ ಟ್ರಸ್ಟ್ ಇದರ ಮುಖ್ಯ ಮ್ಯಾನೇಜರ್ ಅಖ್ತರ್ ಇಮಾಮ್ ಅವರೇ ಈ ಅಪರೂಪದ ಕಾರ್ಯ ಕೈಗೊಂಡವರು. ಹನ್ನೆರಡು ವರ್ಷದವರಿರುವಾಗಿನಿಂದಲೇ ಈ ಎರಡು ಆನೆಗಳನ್ನು ಅವರು ಪ್ರೀತಿಯಿಂದ ಆರೈಕೆ ಮಾಡಿದ್ದಾರೆ.
``ಒಮ್ಮೆ ನನ್ನನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಪಿಸ್ತೂಲು ಹೊಂದಿದ್ದ ದುಷ್ಕರ್ಮಿಗಳು ನನ್ನ ಕೊಠಡಿಗೆ ನುಗ್ಗಲೆತ್ನಿಸಿದಾಗ ಆನೆ ದೊಡ್ಡದಾಗಿ ಘೀಳಿಡಲು ಆರಂಭಿಸಿತ್ತು. ಆಗ ನನಗೆ ಎಚ್ಚರವಾಗಿ ಬೊಬ್ಬೆ ಹೊಡೆದಿದ್ದರಿಂದ ದುಷ್ಕರ್ಮಿಗಳು ಓಡಿ ಹೋದರು,'' ಎಂದು ಅವರು ವಿವರಿಸಿದ್ದಾರೆ.
ರಾಣಿ ಹಾಗೂ ಮೋತಿ ಎಂಬ ಹೆಸರಿನ ಆನೆಗಳು ಅವರಿಗೆ ಕುಟುಂಬ ಸದಸ್ಯರಿದ್ದಂತೆ. ಆದರೆ ತಮ್ಮ ಹೆಸರಿನಲ್ಲಿರುವ ಭೂಮಿಯಲ್ಲಿ ಅರ್ಧ ಭಾಗವನ್ನು ಈ ಆನೆಗಳ ಹೆಸರುಗಳಿಗೆ ವಿಲ್ ಮಾಡಿರುವುದರಿಂದ ಈಗ ತಮ್ಮ ಕುಟುಂಬ ಸದಸ್ಯರಿಂದಲೇ ತಮಗೆ ಅಪಾಯವಿದೆ ಎಂದು ಅವರು ಹೇಳುತ್ತಾರೆ.
ಕುಟುಂಬ ಕಲಹದಿಂದಾಗಿ ಕಳೆದ 10 ವರ್ಷಗಳಿಂದ ಇಮಾಮ್ ಅವರ ಪತ್ನಿ ಹಾಗೂ ಮಕ್ಕಳು ಅವರಿಂದ ದೂರವಿದ್ದಾರೆ. ಒಮ್ಮೆ ಅವರ ಪುತ್ರನೇ ಅವರ ವಿರುದ್ಧ ದೂರು ನೀಡಿ ಅವರು ಬಂಧನಕ್ಕೀಡಾಗುವ ಪ್ರಸಂಗ ಬಂದಿದ್ದನ್ನು ನೆನಪಿಸುವ ಅವರು ನಂತರ ತಾನು ನಿರಪರಾಧಿ ಎಂದು ಸಾಬೀತಾಗಿತ್ತು ಎನ್ನುತ್ತಾರೆ.
ತಮ್ಮ ಪುತ್ರ ಈ ಆನೆಗಳನ್ನು ಕಳ್ಳ ಸಾಗಣೆಗಾರರಿಗೆ ಮಾರಾಟ ಮಾಡಲೂ ಯತ್ನಿಸಿದ್ದ ಎಂದು ಅವರು ಹೇಳುತ್ತಾರೆ. ಒಂದು ವೇಳೆ ಈ ಆನೆಗಳು ಸತ್ತರೆ ವಿಲ್ ಮಾಡಲ್ಪಟ್ಟ ಆಸ್ತಿಯ ಹಣ ತಮ್ಮ ಸಂಘಟನೆಗೆ ಹೋಗುವುದು ಎಂದು ಅವರು ಹೇಳುತ್ತಾರೆ.
Bihar: Akhtar Imam, an animal lover from Patna, gives his entire property to his two elephants Moti & Rani. He says, "Animals are faithful, unlike humans. I've worked for the conservation of elephants for many years. I don't want that after my death my elephants are orphaned". pic.twitter.com/W64jYsED33
— ANI (@ANI) June 10, 2020