ಸಿಡಬ್ಲೂಸಿ: ಜೂ.14ಕ್ಕೆ ಹದಿಹರೆಯದ ಮಕ್ಕಳಿಗೆ ಕಿರುಚಿತ್ರ ಬಿಡುಗಡೆ
ಕುಂದಾಪುರ, ಜೂ.10: ತಾಲೂಕಿನ ಕನ್ಯಾನದಲ್ಲಿರುವ ‘ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ (ಸಿಡಬ್ಲುಸಿ) ಸಂಸ್ಥೆ, ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದವರಿಗೆ ಪ್ರೌಢಾವಸ್ಥೆ, ಲಿಂಗ, ದೇಹದ ಪರಿಕಲ್ಪನೆ ಹಾಗು ಲೈಂಗಿಕತೆಯ ಕುರಿತಂತೆ ನಿರ್ಮಿಸಿರುವ ಎಂಟು ಕಿರುಚಿತ್ರಗಳನ್ನು ಜೂನ್ 14ರ ಸಂಜೆ 5 ಗಂಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ, ಏನ್ಫೋಲ್ಡ್ ಸಂಸ್ಥೆಯ ಸಹಯೋಗದೊಂದಿಗೆ ವೈಯಕ್ತಿಕ ಸುರಕ್ಷತೆ, ದೇಹದ ಪರಿಕಲ್ಪನೆ, ಪ್ರೌಢಾವಸ್ಥೆ, ಲಿಂಗ ಹಾಗು ಲೈಂಗಿಕತೆ, ಅಂತರ್ಜಾಲ ಸುರಕ್ಷತೆ, ಮಕ್ಕಳ ಕಳ್ಳಸಾಗಾಣಿಕೆ ಹಾಗು ಶೋಷಣೆಗೆ ಸಂಬಂಧಿಸಿದ ಕಿರುಚಿತ್ರಗಳನ್ನು ಹಾಗು ಅದಕ್ಕೆ ಸಹಕಾರಿಯಾದ ಪ್ರಕಟಣೆಗಳನ್ನು ಮಕ್ಕಳ ಹಾಗು ಯುವ ಸಬಲೀಕರಣ ಶಿಕ್ಷಣದ ನೆಲೆಯಲ್ಲಿ ನಿರ್ಮಿಸಿ ಬಿಡುಗಡೆಗೊಳಿಸಲಿದೆ.
ಈ ನಿರ್ಮಾಣವನ್ನು ಶೋಷಣೆಯ ಗುರುತಿಸುವಿಕೆ, ತಡೆಗಟ್ಟುವಿಕೆ ಹಾಗು ಅದನ್ನು ವರದಿ ಮಾಡುವ ನಿಟ್ಟಿನಲ್ಲಿ ಮಕ್ಕಳ ಸಶಕ್ತತೆ- ಸುರಕ್ಷಿತ ಸಮುದಾಯ ಗಳನ್ನೂ ನಿರ್ಮಿಸುವತ್ತ ಎಂದು ಉಲ್ಲೇಖಿಸಲಾಗಿದೆ. ಈ ಕಿರುಚಿತ್ರಗಳ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ಸಹಾಯವನ್ನು ಯುನಿಸೆಫ್ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕಿರುಚಿತ್ರಗಳು ಮಕ್ಕಳನ್ನು ಶೋಷಣೆಯ (ದೈಹಿಕ, ಭಾವನಾತ್ಮಕ ಹಾಗು ಲೈಂಗಿಕ) ಗುರುತಿಸುವಿಕೆ, ತಡೆಗಟ್ಟುವಿಕೆ ಹಾಗು ಅದನ್ನು ವರದಿ ಮಾಡುವುದರ ನಿಟ್ಟಿನಲ್ಲಿ ಸಶಕ್ತಗೊಳಿಸುವುದರ ಜೊತೆಗೆ ಮಕ್ಕಳ ಹಕ್ಕುಗಳ ಸ್ನೇಹಿ ವಾತಾವರಣ ವುಳ್ಳ ಸಮುದಾಯದ ನಿರ್ಮಿಸುವ ನಿಟ್ಟಿನಲ್ಲಿ ಒಂದು ದಿಟ್ಟ ಪ್ರಯತ್ನವಾಗಿದೆ. ಈ ಕಿರುಚಿತ್ರಗಳೊಂದಿಗೆ ಬಿಡುಗಡೆಗೊಳಿಸಲಾದ ಪ್ರಕಟಣೆಗಳು ಮಕ್ಕಳಿಗೆ ಹಾಗು ಅವರೊಂದಿಗಿನ ಹಿರಿಯ ಸೌಕರ್ಯಕಾರಕರಿಗೆ ಸಹಾಯಕಾರಿ ಯಾಗಲು ತಯಾರಿಸಲಾಗಿದೆ. ಇವುಗಳಿಂದ ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿ ಮಾಡುವ ಮೂಲಕ ಅವರು ಹೆಚ್ಚು ಚರ್ಚೆ ಮಾಡದಂತಹ ವಿಷಯ ಗಳನ್ನು ಮುಕ್ತವಾಗಿ, ಸ್ಪಷ್ಟವಾಗಿ ಹಂಚಿಕೊಳ್ಳಬಹುದು ಹಾಗು ಅಂತಹ ವಾತಾವರಣದಲ್ಲಿ ಹಿರಿಯರು ಅದನ್ನು ಸಹಾನುಭೂತಿಯಿಂದ ಕೇಳಿಸಿಕೊಳ್ಳ ಬಹುದಾಗಿದೆ. ಈ ಕಿರುಚಿತ್ರಗಳಲ್ಲಿ ಮಕ್ಕಳು ಹಾಗು ಹಿರಿಯರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆಗಳನ್ನು ಹಾಗು ಅವರ ರಕ್ಷಣೆಯ ಹಕ್ಕನ್ನು ಎತ್ತಿ ಹಿಡಿಯುವ ಕಾನೂನುಗಳ ಕುರಿತ ಮುಖ್ಯ ಅಂಶಗಳನ್ನು ನೀಡಲಾಗಿದೆ.
‘ಮಕ್ಕಳ ತೂಫಾನ್’ ಎಂಬ ಹೆಸರಿನಲ್ಲಿ ದೂರದರ್ಶನ ಚಂದನ ವಾಹಿನಿ ಯಲ್ಲಿ, ಯೂಟ್ಯೂಬ್ ಚಾನೆಲ್ನಲ್ಲಿ ಹಾಗು ಇತರ ವೇದಿಕೆಗಳಲ್ಲಿ ಈ ಕಿರುಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕವಿತಾ ರತ್ನ, ನಿರ್ದೇಶಕರು - ವಕೀಲರು, ಸಿಡಬ್ಲ್ಯೂಸಿ (ಮೊ:+919448990480) ಅಥವಾ ನಿಶಿತ ಖಜಾನೆ, ವಕೀಲರು, ಸಿಡಬ್ಲ್ಯೂಸಿ (+919739362452) ಇವರನ್ನು ಸಂಪರ್ಕಿಸುವಂತೆ ಸಿಡಬ್ಲೂಸಿ ಪ್ರಕಟಣೆ ತಿಳಿಸಿದೆ.







