ರಾಜ್ಯ ಸರಕಾರ ಅನುಮತಿ ನೀಡಿದ ಬಳಿಕವೇ ಪದಗ್ರಹಣ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜೂ.10: ಪ್ರತಿಜ್ಞಾ ಕಾರ್ಯಕ್ರಮವು ಇಡೀ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಯಾವುದೇ ಕಾರಣಕ್ಕೂ ನಾವು ಇದನ್ನು ನಿಲ್ಲಿಸುವುದಿಲ್ಲ. ನೀವು ಏನೆ ಪ್ರಯತ್ನ ಮಾಡಿದರೂ ಕಾನೂನಿನ ಚೌಕಟ್ಟಿನಲ್ಲಿ, ನೀವು ಅನುಮತಿ ಕೊಟ್ಟಾಗಲೆ ಕಾರ್ಯಕ್ರಮ ಮಾಡುತ್ತೇನೆ. ಈಗ ಯೋಜಿಸಿರುವಂತೆ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.12ರಂದು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ಕ್ಷಣದಿಂದ ಒಂದು ನಿಮಿಷ ವ್ಯಯ ಮಾಡದೆ ಕೆಲಸ ಮಾಡುತ್ತಿದ್ದೇನೆ. ಸಾಂಪ್ರದಾಯಿಕವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಡೆಯಬೇಕಿತ್ತು. ಆ ಕಾರ್ಯಕ್ರಮಕ್ಕೆ ಅನೇಕ ಅಡ್ಡಿ ಬರುತ್ತಿವೆ. ಮೂರು ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಿಕೆಯಾಗಿದೆ ಎಂದರು.
ಮೇ 31, ಜೂ 7, ಆನಂತರ ಜೂ.14 ದಿನಾಂಕ ನಿಗದಿಯಾಗಿತ್ತು. ಇದಕ್ಕೆ ಪೊಲೀಸ್ ಆಯುಕ್ತರ ಮೌಕಿಕ ಅನುಮತಿ ಪಡೆಯಲಾಗಿತ್ತು. 7800 ಕಡೆ ಜಾಗ ನಿಗದಿ ಪಡಿಸಲಾಗಿತ್ತು, ಹೆಚ್ಚುವರಿಯಾಗಿ ಮೂರುವರೆ ಸಾವಿರ ಜಾಗದಲ್ಲಿ ಎಲ್‍ಇಡಿ ಸ್ಕ್ರೀನ್ ಹಾಕಿ ಒಂದುವರೆ ತಿಂಗಳಿನಿಂದ ತಯಾರಿ ನಡೆಸಿದ್ದರೆ ನಿನ್ನೆ ಸಂಜೆ ಸರಕಾರ ಅನುಮತಿ ನಿರಾಕರಿಸಿದೆ ಎಂದು ಅವರು ಹೇಳಿದರು.
ಅನುಮತಿ ಕೇಳಿ ಸಿಎಂ, ಮುಖ್ಯಕಾರ್ಯದರ್ಶಿ ಸೇರಿ ಎಲ್ಲರಿಗೂ ಪತ್ರ ಬರೆಯಲಾಗಿತ್ತು. ಯಾವ ರೀತಿ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಲಾಗಿತ್ತು. ಕೆಪಿಸಿಸಿ ಮುಂದೆ ಸುರಕ್ಷಿತ ಅಂತರ ಕಾಪಾಡಿಕೊಂಡು ಪೆಂಡಾಲ್ ಹಾಕಿ, ನೂರೈವತ್ತು ಜನ ಭಾಗವಹಿಸುವವರಿದ್ದರು. ಅದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಅವರು ಸಣ್ಣ ರಾಜಕಾರಣ ಮಾಡಲ್ಲ ಎಂದುಕೊಂಡಿದ್ದೆ. ರಾಜ್ಯ ಸರಕಾರದ ಸಚಿವರು ಹೋದ ಕಡೆಯಲೆಲ್ಲಾ ಯಾವ ರೀತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಗೊತ್ತಿದೆ. ಪದಗ್ರಹಣಕ್ಕೆ ಅನುಮತಿ ನಿರಾಕರಿಸಿರುವುದು ರಾಜಕೀಯ ದಾಖಲೆ. ಅಷ್ಟೇ ಅಲ್ಲ ಕಾಂಗ್ರೆಸ್ ಶಾಸಕಾಂಗ ಸಭೆಗೂ ಅನುಮತಿ ನಿರಾಕರಿಸಿದರು ಎಂದು ಅವರು ಹೇಳಿದರು.
ರಾಜ್ಯ ಸರಕಾರ ನಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡಬಹುದಾಗಿತ್ತು. ಆದರೆ ಅನುಮತಿ ಯಾವ ಕಾರಣಕ್ಕೆ ನಿರಾಕರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಕಾಣುತ್ತಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಹೀಗಾಗಿ ಅವರು ಅನುಮತಿ ಕೊಟ್ಟಾಗಲೆ ಕಾರ್ಯಕ್ರಮ ಮಾಡುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿಯ ಅನೇಕ ಮುಖಂಡರು ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರೆ ಕಾನೂನು ಮಾಡಿ ಅದನ್ನು ಉಲ್ಲಂಘನೆ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಇಲ್ಲ. ನಾವು ಕಾನೂನಾತ್ಮಕವಾಗಿ ಅನುಮತಿ ಕೇಳಿದರೆ ಕೊಡುತ್ತಿಲ್ಲ. ಸರಕಾರದ ಈ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ ಎಂದು ಶಿವಕುಮಾರ್ ಕಿಡಿಗಾರಿದರು.
ಪಶ್ಚಿಮ ಬಂಗಾಳ, ಬಿಹಾರದಲ್ಲಿ ಅಲ್ಲಿನ ಬಿಜೆಪಿ ನಾಯಕರು ದೊಡ್ಡ ದೊಡ್ಡ ರ‍್ಯಾಲಿ ನಡೆಸಿದ್ದಾರೆ. ಬಿಹಾರದಲ್ಲಿ ಎಪ್ಪತ್ತು ಸಾವಿರ ಎಲ್ ಇ ಡಿ ಸ್ಕ್ರೀನ್ ಹಾಕಿ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೆ ಒಂದು ನಮಗೆ ಒಂದು ಕಾನೂನು ಇದೆಯಾ? ಎಂದು ಅವರು ಪ್ರಶ್ನಿಸಿದರು.
ಆನ್‍ಲೈನ್ ಕಾರ್ಯಕ್ರಮ ನಮ್ಮ ಐಡಿಯಾ, ಇದನ್ನು ಬಿಜೆಪಿ ನಕಲು ಮಾಡಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಕಲು ಮಾಡುತ್ತಿದ್ದಾರೆ, ನಮಗೆ ಅನುಮತಿ ನಿರಾಕರಿಸಿ, ಬಿಜೆಪಿ ನಮ್ಮದೆ ರೀತಿಯಲ್ಲಿ ಅದೇ ದಿನ ಅದೇ ಸಮಯಕ್ಕೆ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿ ಅವರು ಕಾರ್ಯಕ್ರಮ ಮಾಡುವುದಕ್ಕೆ, ರಾಷ್ಟ್ರೀಯ ಪ್ರಕೃತಿ ವಿಕೋಪ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಶಿವಕುಮಾರ್ ಹೇಳಿದರು.
ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕೂರಲ್ಲ. ವಿಧಾನಪರಿಷತ್ ಚುನಾವಣೆ ಬಳಿಕ ರಾಜಕೀಯೇತರ ಪ್ರವಾಸ ಮಾಡುತ್ತೇನೆ. ಕೊರೋನದಲ್ಲಿ ಜನರ ಕಷ್ಟಗಳೇನು, ರಾಜ್ಯ ಮತ್ತು ಕೇಂದ್ರ ಸರಕಾರದ ಪ್ಯಾಕೇಜ್ ತಲುಪಿದೆಯೆ ಎಂದು ಕೇಳುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಅವರು ತಿಳಿಸಿದರು.
ನನಗೆ ಮುಖ್ಯಮಂತ್ರಿಯ ಪ್ರೀತಿ ಬೇಕಿಲ್ಲ. ಜನರ ಪ್ರೀತಿ ಸಾಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರತಿಜ್ಞಾ ಕಾರ್ಯಕ್ರಮ ಅನುಮತಿ ನಿರಾಕರಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ, ನಾಯಕರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಷಫಿ, ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.







