ಮಹಾರಾಷ್ಟ್ರದಲ್ಲಿ ಕೊರೋನ ವೈರಸ್‌ನ ಸಮುದಾಯ ಹರಡುವಿಕೆ ಇಲ್ಲ: ಆರೋಗ್ಯ ಸಚಿವ

ಮುಂಬೈ,ಜೂ.10: ಕೊರೋನ ವೈರಸ್‌ನ 90,000ಕ್ಕೂ ಅಧಿಕ ಪ್ರಕರಣಗಳೊಂದಿಗೆ ದೇಶದ ಅತ್ಯಂತ ದೊಡ್ಡ ಹಾಟ್‌ಸ್ಪಾಟ್ ಆಗಿರುವ ಮಹಾರಾಷ್ಟ್ರದ ಸರಕಾರವು ಸಮುದಾಯ ಪ್ರಸರಣದ ಎಲ್ಲ ವರದಿಗಳನ್ನೂ ಸ್ಪಷ್ಟವಾಗಿ ನಿರಾಕರಿಸಿದೆ. ದಿಲ್ಲಿಯಲ್ಲಿ ಸಮುದಾಯ ಸೋಂಕು ಹರಡುವಿಕೆಯ ಕಳವಳಗಳ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜ್ಯದ ಅರೋಗ್ಯ ಸಚಿವ ರಾಜೇಶ ಟೋಪೆ ಅವರು,ಸಮುದಾಯ ಸೋಂಕು ಹರಡುತ್ತಿದೆ ಎನ್ನುವುದನ್ನು ತಾನು ನಂಬಿಲ್ಲ ಮತ್ತು ಇದು ಸರಕಾರದ ಅಭಿಪ್ರಾಯವೂ ಆಗಿದೆ ಎಂದರು.
ರಾಷ್ಟ್ರ ರಾಜಧಾನಿಯಲ್ಲಿನ ಅರ್ಧದಷ್ಟು ಕೊರೋನ ವೈರಸ್ ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚಲಾಗುತ್ತಿಲ್ಲ ಮತ್ತು ಇದು ಸಮುದಾಯ ಹರಡುವಿಕೆಯನ್ನು ಸೂಚಿಸುತ್ತದೆ ಎಂದು ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಂಗಳವಾರ ಹೇಳಿದ್ದರು. ಆದರೆ ಕೇಂದ್ರವು ಅವರ ಹೇಳಿಕೆಯನ್ನು ತಿರಸ್ಕರಿಸಿತ್ತು. ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಜೈನ್,ಸಮುದಾಯದಲ್ಲಿ ಸೋಂಕು ಹರಡಿದೆ,ಆದರೆ ಇದು ಸಮುದಾಯ ಪ್ರಸರಣವೇ ಅಲ್ಲವೇ ಎನ್ನುವುದನ್ನು ಕೇಂದ್ರವೇ ಘೋಷಿಸಬೇಕು. ಅದೊಂದು ತಾಂತ್ರಿಕ ಶಬ್ದವಾಗಿದೆ ಎಂದು ಹೇಳಿದರು.
ಶೇ.20ರಿಂದ 40ರಷ್ಟು ಪ್ರಕರಣಗಳು ನೇರವಾಗಿ ಸಮುದಾಯದಿಂದ ವರದಿಯಾಗಿರಬೇಕು ಮತ್ತು ಅವುಗಳ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ಸಮುದಾಯ ಸೋಂಕು ಎಂದು ಪರಿಗಣಿಸಬಹುದು. ಆದರೆ ಮಹಾರಾಷ್ಟ್ರದಲ್ಲಿ ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಪ್ರತಿಯೊಂದೂ ಪ್ರಕರಣದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಟೋಪೆ ಹೇಳಿದರು.





