ಹೋಮ್ ಸೀಲ್‌ಡೌನ್ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಉಡುಪಿ ಡಿಸಿ

ಉಡುಪಿ, ಜೂ.10: ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರನ್ನು ಮನೆ ಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಿ, ಆ ಮನೆಯನ್ನು ಸೀಲ್‌ಡೌನ್ ಮಾಡುವ ಕುರಿತು ಸರಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಈ ಕ್ವಾರಂಟೈನ್ ನಿಯಮ ಗಳನ್ನು ಉಲ್ಲಂಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಕ್ವಾರಂಟೈನ್ ನಿಯಮದ ಅನುಷ್ಠಾನ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ಹಿಸಿ ಅವರು ಮಾತನಾಡುತಿದ್ದರು.
ಮಹಾರಾಷ್ಟ್ರದಿಂದ ಬರುವವರನ್ನು 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಿ ಆ ಮನೆಯನ್ನು ಸೀಲ್‌ಡೌನ್ ಮಾಡಬೇಕಾಗಿದೆ. ಮನೆಯ ಸುತ್ತ ಟೇಪ್ ಹಾಕಿ, ಮನೆಗೆ ಸ್ಟಿಕ್ಕರ್ ಅಂಟಿಸಬೇಕು ಹಾಗೂ ಅಕ್ಕಪಕ್ಕದ ಎರಡು ಮನೆಗೆ ಈ ಬಗ್ಗೆ ತಿಳಿಸಬೇಕು. ಕ್ವಾರಂಟೈನ್‌ನಲ್ಲಿರುವರು ನಿಯಮ ಉಲ್ಲಂಘಿಸಿ ಹೊರಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಅವರಿಗೆ ಸೂಚಿಸಬೇಕು ಎಂದವರು ಹೇಳಿದರು.
ಸೀಲ್‌ಡೌನ್ ಮಾಡಿದ ಮನೆಯ ನಿವಾಸಿಗಳು 14 ದಿನದ ದಿನಸಿ ಸಾಮಗ್ರಿ ಗಳನ್ನು ಮೊದಲೇ ಖರೀದಿಸಿರಬೇಕು. ಅವರಿಗೆ ಹಾಲು ಮತ್ತು ತರಕಾರಿಯನ್ನು ನಿರ್ದಿಷ್ಟ ಅಂಗಡಿಯಿಂದ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಅಧಿಕಾರಿಗಳ ತಂಡ ಪ್ರತೀ ದಿನ ಈ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಹಾಗೂ ಅದೇ ದಿನ ಸಂಜೊಳಗೆ ವರದಿ ನೀಡಬೇಕು ಎಂದರು.
ಕ್ವಾರಂಟೈನ್‌ಗೆ ಬರುವವರ ಬಗ್ಗೆ ಗ್ರಾಪಂ ನಿಗಾ ವಹಿಸಲು ಸೂಚಿಸಿದ ಅವರು, ಗ್ರಾಪಂ ಆಯ್ಕೆ ಮಾಡಿದ ಸಿಬ್ಬಂದಿಗಳು ಕ್ವಾರಂಟೈನ್‌ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಪ್ರತಿದಿನ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ ವಾಚ್‌ಆ್ಯಪ್‌ನಲ್ಲಿ ಭೇಟಿ ನೀಡಿದ ಮಾಹಿತಿಯನ್ನು ನೀಡಬೇಕು. ಇನ್ನು ಪ್ರತಿ ತಾಲೂಕಿನಲ್ಲಿ ತಲಾ ಎರಡು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಮಾತ್ರ ಇರುತ್ತದೆ. ಅಗತ್ಯವಿದ್ದವರಿಗೆ ಹೋಟೆಲ್ ಕ್ವಾರಂಟೈನ್‌ಗೆ ಸಹ ಅವಕಾಶ ವಿದೆ ಎಂದು ಡಿಸಿ ಹೇಳಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್ ನಲ್ಲಿ ಸೀಲ್ ಹಾಕಿದವರು ಹೊರಗೆ ಅನಗತ್ಯವಾಗಿ ತಿರುಗಾಡುವುದು ಕಂಡು ಬಂದಲ್ಲಿ, ಸಾರ್ವಜನಿಕರು ದೂರವಾಣಿ ಸಂಖ್ಯೆ 100ಕ್ಕೆ ಕರೆಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸೇವಾಸಿಂಧು ಮೂಲಕ ಮಹಾರಾಷ್ಟ್ರ ದಿಂದ ಬರುವವರ ಪಾಸ್‌ಗಳನ್ನು ಅನುಮೋದಿಸುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿದ್ದು, ಅವರು ನಿಗದಿತ ದಿನಾಂಕ ಆಯ್ಕೆ ಮಾಡಿ ಬರಬಹುದಾಗಿದೆ, ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರು, ಜಿಲ್ಲೆಯಲ್ಲಿ ಎಲ್ಲಾ ಏಳು ತಾಲೂಕು ಕೇಂದ್ರಗಳಲ್ಲಿ ಆರಂಭಿಸಿರುವ ಜಿಲ್ಲಾ ವರದಿ ಕೇಂದ್ರಗಳಲ್ಲಿ ತಮ್ಮ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು.
ಕೆಲವೊಂದು ಕಡೆಗಳಲ್ಲಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಇದರಿಂದ ಆತಂಕ ಪಡುವ ಅಗತ್ಯವಿಲ್ಲ. ಶಾಲೆ ಕೊಠಡಿಗಳನ್ನು ರೋಗ ನಿರೋಧಿಕರಿಸಿ ಸ್ವಚ್ಚಗೊಳಿಸಲಾಗಿದೆ. ಪರೀಕ್ಷೆಗೆ 3 ದಿನ ಮುನ್ನ ಹಾಗೂ ಪ್ರತೀ ಪರೀಕ್ಷೆಯ ನಂತರ ಮತ್ತೊಮ್ಮೆ ಪರೀಕ್ಷೆಗೆ ಕೊಠಡಿಯನ್ನು ರೋಗ ನಿರೋಧಿಕರಿಸಿ ಸ್ವಚ್ಚಗೊಳಿಸಲಾಗುವುದು. ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಎಎಸ್ಪಿ ಕುಮಾರಚಂದ್ರ, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







