ಜಿಲ್ಲಾಡಳಿತ ವಿರುದ್ಧ ಆಧಾರ ರಹಿತ ಆರೋಪ ಮಾಡಿದರೆ ಕಠಿಣ ಕ್ರಮ : ಉಡುಪಿ ಡಿಸಿ

ಉಡುಪಿ, ಜೂ.10: ಕೋವಿಡ್-19ರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ಸುಖಾಸುಮ್ಮನೇ, ಯಾವುದೇ ಆಧಾರವಿಲ್ಲದೇ ಸಾಮಾಜಿಕ ಮಾದ್ಯಮದಲ್ಲಿ ಅವಹೇಳನಕರವಾಗಿ ಆರೋಪ ಮಾಡುವವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ 947 ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲಾ ರೋಗಿಗಳಿಗೂ ಸಂಪೂರ್ಣ ಉಚಿತವಾದ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಕೆಲವರಿಂದ 3.5 ಲಕ್ಷ ರೂ. ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವುದು ಸಂಪೂರ್ಣ ಕಾಲ್ಪನಿಕ. ಜಿಲ್ಲಾಡಳಿತ ಹಾಗೂ ಯಾವುದೇ ಸಂಸ್ಥೆಯ ವಿರುದ್ಧ ಇಲ್ಲಸಲ್ಲದ ಕಲ್ಪನೆ ಮಾಡಿಕೊಂಡು ಆಧಾರ ರಹಿತ ಅರೋಪ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಆದರೂ ಸಾಮಾಜಿಕ ಮಾಧ್ಯಮದಲ್ಲಿ ಮನಸ್ಸಿಗೆ ಬಂದದ್ದು ಬರೆಯ ಬಹುದು ಎಂಬುದು ಅವರ ತಪ್ಪು ಕಲ್ಪನೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.





