ಕೊರೋನ ಸೋಂಕು: ಭಾರತದಲ್ಲಿ ಸಕ್ರಿಯ ಪ್ರಕರಣಗಳನ್ನು ಮೀರಿಸಿದ ಚೇತರಿಕೆ ಪ್ರಕರಣ

ಹೊಸದಿಲ್ಲಿ, ಜೂ.10: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂಬ ವರದಿಯ ಮಧ್ಯೆಯೇ, ಇದೇ ಮೊದಲ ಬಾರಿಗೆ ದೇಶದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಕೊರೋನ ಸಕ್ರಿಯ ಸೋಂಕಿನ ಪ್ರಮಾಣವನ್ನು ಹಿಂದಿಕ್ಕಿದೆ.
ಕೊರೋನ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ 49% ಸಮೀಪಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೇಳಿಕೆ ತಿಳಿಸಿದೆ. ಬುಧವಾರ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,35,206ಕ್ಕೆ ತಲುಪಿದ್ದರೆ, ಕೊರೋನ ಸೋಂಕು ಸಕ್ರಿಯವಾಗಿರುವವರ ಸಂಖ್ಯೆ 1,33,632 ಆಗಿದೆ. ಬುಧವಾರದ ವರೆಗಿನ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 5,892 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದು ಗುಣಮುಖರಾಗುವ ಪ್ರಮಾಣ 48.88% ಆಗಿದೆ ಎಂದು ಇಲಾಖೆ ತಿಳಿಸಿದೆ.
ಭಾರತದಲ್ಲಿ ಇದುವರೆಗೆ ಕೊರೋನ ಸೋಂಕಿನಿಂದ 7,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 2.76 ಲಕ್ಷ ಸೋಂಕಿತರಿದ್ದಾರೆ. ಅತ್ಯಧಿಕ ಕೊರೋನ ಸೊಂಕು ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದಲ್ಲಿ (90,787 ಪ್ರಕರಣ) ಗುಣಮುಖರಾಗುವ ಪ್ರಮಾಣ 46.9%ವಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಗುಣಮುಖರಾಗುವ ಪ್ರಮಾಣ 52.4%ವಾಗಿದೆ. ಪಂಜಾಬ್‌ನಲ್ಲಿ ಗುಣಮುಖರಾಗುವ ಪ್ರಮಾಣ 79.6% ಆಗಿದೆ ಎಂದು ಇಲಾಖೆ ತಿಳಿಸಿದೆ.
ವಿಶ್ವದಲ್ಲಿ ಅತ್ಯಧಿಕ ಕೊರೋನ ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ಒ)ಭಾರತವನ್ನು ಕೋವಿಡ್-19 ಸಮುದಾಯ ಹರಡುವಿಕೆ ಹಂತದ ವಿಭಾಗದಲ್ಲಿ ಸೇರಿಸದೆ ಪ್ರಕರಣಗಳ ಸಮೂಹ ವಿಭಾಗದಲ್ಲಿಯೇ ಇರಿಸಿದೆ. ಭಾರತದಲ್ಲಿ 1,00,000 ಜನಸಂಖ್ಯೆಗೆ ಕೊರೋನ ಸೋಂಕು ಹರಡುವ ಪ್ರಮಾಣವು ಇದೇ ರೀತಿಯ ಪ್ರಕರಣಗಳನ್ನು ಹೊಂದಿರುವ ಹಲವು ದೇಶಗಳಿಗಿಂತ ಬಹಳ ಕಡಿಮೆ ಇರುವುದರಿಂದ ಭಾರತವನ್ನು ಕೋವಿಡ್-19 ಸಮುದಾಯ ಹರಡುವಿಕೆ ಹಂತಕ್ಕೆ ಸೇರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಮಿಶೆಲ್ ರಯಾನ್ ಹೇಳಿದ್ದಾರೆ.







