ಜೂ.12: ಗುರುಪುರ ಸೇತುವೆ ಉದ್ಘಾಟನೆ

ಮಂಗಳೂರು, ಜೂ.10: ಕುಲಶೇಖರ-ಮೂಡುಬಿದಿರೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಜೂ.12ರಂದು ಪೂ.11ಕ್ಕೆ ಉದ್ಘಾಟಿಸಲಿದ್ದಾರೆ.
ಸುಮಾರು 39.42 ಕೋ.ರೂ. ವೆಚ್ಚದ ಈ ಸೇತುವೆಯ ನಿರ್ಮಾಣ ಕಾರ್ಯವು ಕಳೆದ ವರ್ಷದ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಕಾಮಗಾರಿ ಪೂರ್ಣಗೊಳಿಸಲು 2 ವರ್ಷದ ಗಡುವು ನೀಡಲಾಗಿದ್ದರೂ ಕೂಡ ನಗರದ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯು ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿದೆ. 7 ಅಂಗಣಗಳ ಸೇತುವೆಯ ಎರಡೂ ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡುವ ಫೂಟ್ಪಾತ್ ಹಾಗೂ ಎರಡೂ ತುದಿಗಳಲ್ಲಿ ತಲಾ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣಗೊಳಿಸಲಾಗಿದೆ.
ಗುರುಪುರ ಸೇತುವೆಯ ಕಾಮಗಾರಿಯು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆದಿದೆ. ಹಳೆ ಸೇತುವೆಯಲ್ಲಿ ಘನ ವಾಹನ ಹೊರತುಪಡಿಸಿ ಉಳಿದ ವಾಹನಗಳ (ತ್ರಿಚಕ್ರ, ದ್ವಿಚಕ್ರ) ಸಂಚಾರಕ್ಕೆ ಸಂಬಂಧಿಸಿ ಸಮಾಲೋಚಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.





