324 ಆಸ್ತಿಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗದಿ: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್
ಆಸ್ತಿಗಳ ದರ ಪರಿಷ್ಕರಿಸುವ ಕುರಿತು ಸಭೆ

ಬೆಂಗಳೂರು, ಜೂ.10: ಪಾಲಿಕೆ ವತಿಯಿಂದ ನಗರದ ವಿವಿಧ ಸಂಘ-ಸಂಸ್ಥೆಗಳು, ಟ್ರಸ್ಟ್ ಗಳು, ಸಮಾಜ ಸೇವಾ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿರುವ 324 ಆಸ್ತಿಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗದಿಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಸ್ತಿಗಳು, ಅವುಗಳ ರಕ್ಷಣೆ ಹಾಗೂ ಆಸ್ತಿಗಳಿಂದ ಆದಾಯ ಸಂಗ್ರಹದ ಕುರಿತು ಬುಧವಾರ ನಡೆದ ವಿಶೇಷ ಸಭೆಯಲ್ಲಿ ಆಸ್ತಿಗಳ ದರ ಪರಿಷ್ಕರಿಸುವ ಕುರಿತು ತೀರ್ಮಾನಿಸಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಸಮಾಜ, ಸಮುದಾಯ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ ಬಿಬಿಎಂಪಿಯ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಅವುಗಳಲ್ಲಿ 159 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ವಶಕ್ಕೆ ಪಡೆಯಲಾಗುತ್ತಿದೆ. ಉಳಿದ 165 ಆಸ್ತಿಗಳ ಗುತ್ತಿಗೆ ಚಾಲ್ತಿಯಲ್ಲಿದ್ದು, ಅವುಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗದಿಗೊಳಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಎಲ್ಲ ಆಸ್ತಿಗಳ ನೋಂದಣಿ ಕಡ್ಡಾಯ: ಬಿಡಿಎ ಹಾಗೂ ಸರಕಾರದ ಇತರೆ ಇಲಾಖೆಗಳಿಂದ ಬಿಬಿಎಂಪಿಗೆ ಹಸ್ತಾಂತರಿಸಲಾಗಿರುವ ಆಸ್ತಿಗಳ ಬಗ್ಗೆ ಸೂಕ್ತ ದಾಖಲೆಗಳಿಲ್ಲ. ಹೀಗಾಗಿ ಪಾಲಿಕೆ ಎಲ್ಲ ಆಸ್ತಿಗಳ ಮೇಲ್ವಿಚಾರಣೆಯನ್ನು ವಿಶೇಷ ಆಯುಕ್ತರಿಗೆ ವಹಿಸಲಾಗುತ್ತಿದೆ. ಇವರು ಸಾರ್ವಜನಿಕರು ಕಬಳಿಸಿಕೊಂಡ ಆಸ್ತಿ, ಅಧಿಕಾರಿಗಳಿಂದ ಪ್ರಭಾವಿಗಳ ಪಾಲಾದ ಆಸ್ತಿಗಳನ್ನು ಗುರುತಿಸಿ, ವಶಕ್ಕೆ ಪಡೆದು ಪಾಲಿಕೆ ಹೆಸರಿಗೆ ನೋಂದಣಿ ಮಾಡಿಸಬೇಕು. ಆಸ್ತಿ ಗುರುತಿನ ಸಂಖ್ಯೆ(ಪಿಐಡಿ) ನೀಡಬೇಕು. ನ್ಯಾಯಾಲಯಗಳಲ್ಲಿರುವ ಆಸ್ತಿ ಸಂಬಂಧಿತ ಪ್ರಕರಣಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲು ಕಾನೂನು ಕೋಶದೊಂದಿಗೆ ನಿರಂತರ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ವಿಶೇಷ ಆಯುಕ್ತ (ಆಸ್ತಿ ವಿಭಾಗ) ಮಂಜುನಾಥ್, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಉಪಸ್ಥಿತರಿದ್ದರು.
ಆಸ್ತಿಗಳ ರಕ್ಷಣೆಗೆ 20 ಕೋಟಿ ರೂ. ಮೀಸಲು
ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸದುದ್ದೇಶಕ್ಕೆ ಸಂಘ ಸಂಸ್ಥೆಗಳಿಗೆ ನೀಡಲಾಗಿರುವ ಬಿಬಿಎಂಪಿ ಆಸ್ತಿಗಳನ್ನು ದುರುಪಯೋಗ ಮಾಡಿಕೊಳ್ಳುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. 2020-21ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಆಸ್ತಿಗಳನ್ನು ರಕ್ಷಣೆ ಹಾಗೂ ಫೆನ್ಸಿಂಗ್ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಜತೆಗೆ ಆಸ್ತಿಗಳ ಗುತ್ತಿಗೆ ನವೀಕರಣಕ್ಕೆ ಯಾವುದೇ ರಾಜಕೀಯ ನಾಯಕರು ಅಥವಾ ಇತರೆ ವರ್ಗದ ಪ್ರಭಾವಿಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾಹಿತಿ ನೀಡಿದರು.
ಆಸ್ತಿಗಳ ವಿಭಾಗಕ್ಕೆ ವಿಶೇಷ ತಂಡ
ಪಾಲಿಕೆಯ ಆಸ್ತಿಗಳ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದ್ದು, ದುರ್ಬಲವಾಗಿದೆ. ಹೀಗಾಗಿ ತಹಶೀಲ್ದಾರ್ ಗಳು, ಸಹಾಯಕ ಕಂದಾಯ ಅಧಿಕಾರಿಗಳು, ಇಂಜಿನಿಯರ್ ಗಳು ಹಾಗೂ ಸರ್ವೇಯರ್ ಗಳ ವಿಶೇಷ ತಂಡ ರಚಿಸಿ ಆಸ್ತಿಗಳ ವಿಭಾಗ ಬಲಪಡಿಸಲು ಕ್ರಮವಹಿಸುವಂತೆ ಆಯುಕ್ತರಿಗೆ ತಿಳಸಲಾಗಿದೆ. ಎಂಟು ವಲಯಗಳ ಉಪ ಆಯುಕ್ತರಿಗೆ(ಡಿಸಿ) ಆಸ್ತಿಗಳ ಜವಾಬ್ದಾರಿ ನೀಡುವುದು ಹಾಗೂ ಎಲ್ಲ ಆಸ್ತಿಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
-ಗೌತಮ್ ಕುಮಾರ್, ಬಿಬಿಎಂಪಿ ಮೇಯರ್







