ಎಪಿಎಂಸಿಗಳಲ್ಲಿ ಆರಂಭವಾಗದ ತರಕಾರಿ ಮಾರಾಟ: ಅನುಮತಿಯತ್ತ ರೈತರ ಚಿತ್ತ

ಬೆಂಗಳೂರು, ಜೂ.10: ಕೊರೋನ ಲಾಕ್‍ಡೌನ್‍ನಿಂದ ಎಪಿಎಂಸಿಗಳ ಸ್ಥಿತಿ ಸುಧಾರಿಸುತ್ತಿದ್ದರೂ ಯಶವಂತಪುರ ಎಪಿಎಂಸಿಯಲ್ಲಿ ಮಾತ್ರ ಈರುಳ್ಳಿ, ಆಲೂಗಡ್ಡೆ ಮೊದಲಾದ ತರಕಾರಿಗಳ ಮಾರಾಟಕ್ಕೆ ಅನುಮತಿ ದೊರೆತಿಲ್ಲ.
ತರಕಾರಿ, ಹಣ್ಣುಗಳ ಬೆಳೆದ ರೈತರ ಆಗ್ರಹದ ಮೇರೆಗೆ ದಾಸನಪುರದಲ್ಲಿ ಎಪಿಎಂಸಿ ಆರಂಭವಾಗಿದೆ. ಅಲ್ಲಿ ದಿನಸಿ ಪದಾರ್ಥಗಳು ಮತ್ತು ತರಕಾರಿ, ಹಣ್ಣು ಮಾರಾಟಕ್ಕೆ ಅನುಮತಿ ಇದೆ. ಆದರೆ, ಯಶವಂತಪುರದಲ್ಲಿ ಇನ್ನೂ ಅವಕಾಶ ದೊರೆತಿಲ್ಲ. ಸೀಗೇಹಳ್ಳಿಯಲ್ಲೂ ರೈತರಿಗೆ ಮಾರುಕಟ್ಟೆ ಒದಗಿಸಲಾಗಿದೆ. ಆದರೆ, ಹೊರ ರಾಜ್ಯಗಳಿಂದ ಯಾವ ರೈತರೂ ತಮ್ಮ ಬೆಳೆಗಳ ಮಾರಾಟಕ್ಕೆ ಬರುತ್ತಿಲ್ಲ. ಕೊರೋನ ಸೋಂಕು ಹರಡುವ ಭೀತಿ ಇರುವುದರಿಂದ ಎಲ್ಲರಿಗೂ ಭಯದ ವಾತಾವರಣವಿದೆ. ಎಲ್ಲ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದ್ದು ತರಕಾರಿಗಳ ಮಾರಾಟಕ್ಕೆ ಅನುಮತಿ ದೊರೆತಿಲ್ಲವಾದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೆಂಗಳೂರು ಎಪಿಎಂಸಿ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ ಶಂಕರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿಗಳ ವ್ಯಾಪಾರಕ್ಕೆ ಅನುಮತಿ ದೊರೆಯಲಿಲ್ಲ. ಯಶವಂತಪುರ ಎಪಿಎಂಸಿಗಳಲ್ಲಿ ಮಾರಾಟವಾಗುವ ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಬೆಳೆಗಳನ್ನು ಮಾರಾಟ ಮಾಡಲಾಗದೆ ರೈತರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ರೈತರು, ವರ್ತಕರಿಗೆ ಸರಿಯಾದ ಬೆಲೆ ದೊರೆತಿಲ್ಲ. ಲಾಕ್‍ಡೌನ್ ಸಡಿಲಿಕೆಯಾದ ನಂತರವೂ ತರಕಾರಿಗಳು ಮಾರಾಟವಾಗುತ್ತಿಲ್ಲ. ಎರಡು ದಿನಗಳಲ್ಲಿ ಯಶವಂತಪುರ ಎಪಿಎಂಸಿಯಲ್ಲಿ ತರಕಾರಿ ಮಾರಲು ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಲಾಕ್‍ಡೌನ್‍ನಿಂದ ಕಲಾಸಿಪಾಳ್ಯದಲ್ಲಿರುವ ನಮ್ಮ ತರಕಾರಿ ಮಳಿಗೆಗಳು ಸೀಗೇಹಳ್ಳಿ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದ್ದವು. ಈಗ ಲಾಕ್‍ಡೌನ್ ಸಡಿಲಿಕೆಯಿಂದ ಕಲಾಸಿಪಾಳ್ಯದ ಮಾರುಕಟ್ಟೆ ಒಳಗೆ ಪ್ರವೇಶ ನೀಡಿಲ್ಲ. ರಸೆಗಳಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಅನುಮತಿ ದೊರೆಯುವ ನಿರೀಕ್ಷ ಇದೆ ಎನ್ನುತ್ತಾರೆ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಗೋಪಿ ಆರ್.ವಿ.
ಬಾಡಿಗೆ ವಿನಾಯತಿ ನೀಡಿ: ಎಪಿಎಂಸಿಗಳಲ್ಲಿ ಅವಕಾಶ ನೀಡಿದ್ದಾರೆ. ಆದರೆ ತರಕಾರಿ ಮಾರಾಟಕ್ಕೆ ಅವಕಾಶ ದೊರೆತಿಲ್ಲವಾದ್ದರಿಂದ ಮಳಿಗೆಗಳಿಗೆ ಬಾಡಿಗೆ ಕಟ್ಟಲು ಹಣ ಇಲ್ಲದಂತಾಗಿದೆ. ಲಾಕ್‍ಡೌನ್ ಹಿನ್ನಲೆಯಲ್ಲಿ ಬಾಡಿಗೆಯಿಂದ ವಿನಾಯತಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಒಂದೇ ಬಾರಿಗೆ 5 ರಿಂದ 6 ಲಕ್ಷ ರೂ. ಬಾಡಿಗೆ ವಿಧಿಸಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಉದಯ ಶಂಕರ್.
ಜಕ್ಕೂರು ಬಳಿ ತರಕಾರಿ ಮಾರುಕಟ್ಟೆ
ಯಲಹಂಕದಲ್ಲಿನ ಜಕ್ಕೂರು ಏಪೆ ಪೋರ್ಟ್ ಬಳಿ ಸರಕಾರದ ಜಾಗ ಇದ್ದು ಅಲ್ಲಿ ಎಪಿಎಂಸಿ ವತಿಯಿಂದ ತರಕಾರಿ ಮಾರಾಟಗಾರರಿಗೆ ಮಾರುಕಟ್ಟೆ ನಿರ್ಮಿಸಿಕೊಡಬೇಕು. ಇದರಿಂದ ಬೇರೆ ಊರುಗಳ ತರಕಾರಿ ಬೆಳೆಗಾರರಿಗೂ ಅನುಕೂಲವಾಗಲಿದೆ.
-ರವಿಶಂಕರ್, ಅಧ್ಯಕ್ಷ, ರವಿ ಈರುಳ್ಳಿ ಟ್ರೇಡಿಂಗ್ ಕಂಪನಿಲಾಕ್ಡೌನ್ನಿಂದ ಎಪಿಎಂಸಿಗಳಲ್ಲಿ ದಿನಸಿ ಪದಾರ್ಥಗಳ ಮಾರಾಟ ಶೇ.10 ರಷ್ಟು ಕಡಿಮೆಯಾಗಿದೆ. ಆದರೆ ಯಾವ ವ್ಯತ್ಯಾಸಗಳೂ ಇಲ್ಲ. ಮುಂದಿನ ದಿನಗಳಲ್ಲಿ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ.
-ರಮೇಶ್, ಜಂಟಿ ನಿರ್ದೇಶಕ, ಎಪಿಎಂಸಿ







