ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಅನುಮತಿ ಏಕೆ ನೀಡುತ್ತಿಲ್ಲ : ಯು.ಟಿ. ಖಾದರ್ ಪ್ರಶ್ನೆ

ಮಂಗಳೂರು, ಜೂ.10: ಲಾಕ್‌ಡೌನ್ ನಿಯಮಾನುಸಾರವೇ ಕಾರ್ಯಕ್ರಮ ಮಾಡುತ್ತೇವೆ ಎಂದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಅನುಮತಿ ಏಕೆ ನೀಡುತ್ತಿಲ್ಲ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.7ರಂದು ಡಿಕೆಶಿ ಪದಗ್ರಹಣ ನಿಗದಿಯಾ ಗಿದ್ದು, ಜನ ಸೇರದಂತೆ ಸಕಲ ಮುಂಜಾಗ್ರತೆ ವಹಿಸಿ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಕಾಯ್ದೆ ಮುಂದಿಟ್ಟುಕೊಂಡು ಆಗಲೂ ರಾಜ್ಯ ಸರಕಾರ ಅನುಮತಿ ನೀಡಿಲ್ಲ. ಈಗ ಜೂ.14ರ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಎಪಿಡಮಿಕ್ ಆ್ಯಕ್ಟ್‌ನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಯಾವುದೇ ಭಾಗದಿಂದ ಬಂದರೂ ಅವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ, ಲಾಕ್‌ಡೌನ್ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಇರುವಾಗ ಪದಗ್ರಹಣ ಕಾರ್ಯಕ್ರಮ ನಡೆಸಿದರೆ ಮಾತ್ರ ಸಮಸ್ಯೆಯಾಗುತ್ತದೆಯೇ ಎಂದು ಖಾದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ತಳಮಟ್ಟದ ಸಂಘಟನೆ ಮಾಡುತ್ತಿದ್ದು, ಕಾಂಗ್ರೆಸ್ ಮುಖಂಡರೆಲ್ಲರ ಹೋರಾಟ ಬಿಜೆಪಿಯನ್ನು ಕಂಗೆಡಿಸಿದ್ದೇ ಕಾರ್ಯಕ್ರಮ ನಡೆಯದಂತೆ ದಮನಿಸಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ. ಬಿಜೆಪಿಯವರು ದಮನಿಸಿದಷ್ಟು ಜನರು ನಮಗೆ ಪ್ರೋತ್ಸಾಹ ನೀಡಲಿದ್ದಾರೆ. ಅತಿ ಶೀಘ್ರದಲ್ಲೇ ಕಾನೂನುಬದ್ಧವಾಗಿ ಡಿಕೆಶಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ, ಅದೂ ಈಗ ಯೋಜಿಸಿದಕ್ಕಿಂತ ಉತ್ತಮವಾಗಿ ನಡೆಯಲಿದೆ ಎಂದು ಖಾದರ್ ಹೇಳಿದರು.
ಎಸೆಸೆಲ್ಸಿ, ಪಿಯು ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಗಡಿಭಾಗ ಕಾಸರಗೋಡಿನ ವಿದ್ಯಾರ್ಥಿಗಳು ಮಂಗಳೂರಿಗೆ ಪರೀಕ್ಷೆಗೆ ಬರುವ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು. ಕೇವಲ ಹಾಲ್‌ಟಿಕೆಟ್ ತೋರಿಸಿದರೆ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಯು.ಟಿ. ಖಾದರ್ ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಉರ್ವ, ಕದ್ರಿ, ಕಾವೂರು, ಕಂಕನಾಡಿ, ಬಿಜೈ, ಅಳಕೆ ಮಾರುಕಟ್ಟೆಗಳನ್ನು ನಿರ್ಮಿಸುವಾಗ ಅಲ್ಲಿದ್ದ ವ್ಯಾಪಾರಿಗಳಿಗೆ ಮೊದಲೇ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಈಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳನ್ನು ಎಬ್ಬಿಸಿದ್ದಾರೆ. ಇದರಿಂದ ಜನರಿಗೂ ಸಮಸ್ಯೆಯಾಗಿದೆ ಎಂದು ಖಾದರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಿಥುನ್ ರೈ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಎ.ಸಿ. ವಿನಯರಾಜ್, ಮಮತಾ ಗಟ್ಟಿ, ಮುಹಮ್ಮದ್ ಮೋನು, ಅನಿಲ್ ಕಾವೂರು, ಸಂತೋಷ್ ಶೆಟ್ಟಿ ಮತ್ತಿತರರಿದ್ದರು.







