ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಜೂ.15 ಕೊನೆ ದಿನ
ಮಂಗಳೂರು, ಜೂ.10: ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಚೀಟಿಗಳನ್ನು ಜೂ.15ರೊಳಗೆ ಕಚೇರಿಗೆ ಹಿಂದಿರುಗಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳನ್ನು ಸಿರಿವಂತರು ಸಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದೆ. ಅನರ್ಹರು ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಹಲವು ಬಾರಿ ಎಚ್ಚರಿಕೆ ನೀಡುವುದರೊಂದಿಗೆ ಗಡುವನ್ನೂ ನೀಡಲಾಗಿತ್ತು. ಆದರೆ ಮತ್ತೊಮ್ಮೆ ಕೊನೆಯ ಅವಕಾಶ ನೀಡಲಾಗಿದೆ ಎಂದರು.
ಒಂದು ವೇಳೆ ತಾವಾಗಿಯೇ ಹಿಂದಿರುಗಿಸದಿದ್ದಲ್ಲಿ ಅಂತಹ ಕುಟುಂಬಗಳನ್ನು ಇಲಾಖೆಯಿಂದಲೇ ಪತ್ತೆ ಮಾಡಿ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ಹೂಡುವುದು ಮಾತ್ರವಲ್ಲದೆ ಮುಕ್ತ ಮಾರುಕಟ್ಟೆ ದರದಲ್ಲಿ ಪಡಿತರ ಸಾಮಗ್ರಿಯ ದರವನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅರ್ಹರಲ್ಲದ ಕುಟುಂಬಗಳು ಯಾವುವು?: ಸರಕಾರಿ/ ಸರಕಾರಿ ಅನುದಾನಿತ / ಸರಕಾರಿ ಸ್ವಾಮ್ಯದ ಸಂಸ್ಥೆಗಳ/ ಮಂಡಳಿಗಳ/ ನಿಗಮಗಳ/ ಸ್ವಾಯತ್ತ ಸಂಸ್ಥೆಗಳ ಎಲ್ಲ ಖಾಯಂ ನೌಕರರು ಮಾತ್ರವಲ್ಲದೆ, ಆದಾಯ ತೆರಿಗೆ/ ಸೇವಾ ತೆರಿಗೆ/ ಜಿಎಸ್‌ಟಿ/ ವೃತ್ತಿ ತೆರಿಗೆ ಪಾವತಿಸುವವರು, ಹಾಗೂ ತಮ್ಮ ಪಡಿತರ ಚೀಟಿಯಿಂದ ಉದ್ದೇಶ ಪೂರ್ವಕವಾಗಿ ಅಂತಹ ಕುಟುಂಬ ಸದಸ್ಯರ ಹೆಸರನ್ನು ತೆಗೆಸಿರುವವರು, ಸಹಕಾರ ಸಂಘಗಳ ಖಾಯಂ ನೌಕರರು, ಆಸ್ಪತ್ರೆ ನೌಕರರು, ವೈದ್ಯ/ಇಂಜಿನಿಯರ್/ ವಕೀಲ/ ಆಡಿಟರ್ ಮುಂತಾದ ವೃತ್ತಿಪರರು, ದೊಡ್ಡ ಅಂಗಡಿ, ಹೋಟೆಲ್ ವ್ಯಾಪಾರಸ್ಥರು, ಸ್ವಂತ ಉಪಯೋಗಕ್ಕಾಗಿ ಕಾರು/ ಲಾರಿ/ ಜಿಸಿಬಿ /ಟ್ರಾಕ್ಟರ್ ಇತ್ಯಾದಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು, ಅನುದಾನಿತ ಶಾಲಾ-ಕಾಲೇಜುಗಳ ನೌಕರರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವವರು, ಬಹು ರಾಷ್ಟ್ರೀಯ ಕಂಪೆನಿ ಉದ್ದಿಮೆದಾರರು, ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟರ್ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತ ದೊಡ್ಡದಾದ ಮನೆಯನ್ನು ಹೊಂದಿರು ವವರು ಅನರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







