ಕೊರೋನ ಸಾವಿನ ಸಂಖ್ಯೆ ಪ್ರಕಟನೆಯನ್ನು ಪುನರಾರಂಭಿಸಿದ ಬ್ರೆಝಿಲ್

ರಿಯೋ ಡಿ ಜನೈರೊ (ಬ್ರೆಝಿಲ್), ಜೂ. 10: ಕೊರೋನ ವೈರಸ್‌ನಿಂದ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆಯನ್ನು ಪ್ರಕಟಿಸುವುದನ್ನು ಬ್ರೆಝಿಲ್ ಸರಕಾರ ಮಂಗಳವಾರ ಪುನರಾರಂಭಿಸಿದೆ. ಭಾರೀ ಆರೋಗ್ಯ ಬಿಕ್ಕಟ್ಟಿನ ತೀವ್ರತೆಯನ್ನು ಮರೆಮಾಚಲು ಬ್ರೆಝಿಲ್ ಪ್ರಯತ್ನಿಸುತ್ತಿದೆ ಎಂಬ ಆರೋಪಗಳ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ.
ನೂತನ-ಕೊರೋನ ವೈರಸ್‌ನಿಂದ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆಯನ್ನು ಪ್ರಕಟಿಸುವುದನ್ನು ದೇಶದ ಕಡು ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಸರಕಾರ ಶುಕ್ರವಾರದಿಂದ ತಡೆಹಿಡಿದಿತ್ತು. ನೂತನ ವಿಧಾನವನ್ನು ಅನುಸರಿಸಲಾಗಿದ್ದು, ಇನ್ನು ಮುಂದೆ ಪ್ರತಿ ದಿನ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ಮಾತ್ರ ಪ್ರಕಟಿಸುವುದಾಗಿ ಅದು ಹೇಳಿತ್ತು.
ಹಲವು ಮಂದಿ ಖ್ಯಾತನಾಮರು ಅವ್ಯವಹಾರ ನಡೆದಿರುವ ಸಾಧ್ಯತೆ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿದ್ದರು ಹಾಗೂ ಹಿಂದಿನ ವಿಧಾನವನ್ನೇ ಅನುಸರಿಸುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡರ್ ಡಿ ಮೊರಾಸ್ ಸೋಮವಾರ ಆದೇಶ ನೀಡಿದ್ದರು.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,272 ಸಾವುಗಳು ಸಂಭವಿಸಿವೆ ಹಾಗೂ ಕೊರೋನ ವೈರಸ್‌ನಿಂದಾಗಿ ಈವರೆಗೆ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 38,406 ಎಂಬುದಾಗಿ ಮಂಗಳವಾರ ಆರೋಗ್ಯ ಇಲಾಖೆ ಪ್ರಕಟಿಸಿದೆ. ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ಬಳಿಕ ಬ್ರೆಝಿಲ್ ಮೂರನೇ ಸ್ಥಾನದಲ್ಲಿದೆ.







