ನಿಯಂತ್ರಣ ರೇಖೆಯ ಪರಿಸ್ಥಿತಿ ತಿಳಿಗೊಳಿಸಲು; ಉಭಯ ದೇಶಗಳಿಂದ ಧನಾತ್ಮಕ ಒಮ್ಮತ ಜಾರಿ ಆರಂಭ: ಚೀನಾ

ಬೀಜಿಂಗ್, ಜೂ. 10: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಜೂನ್ 6ರಂದು ಭಾರತ ಮತ್ತು ಚೀನಾಗಳ ಹಿರಿಯ ಸೇನಾ ನಾಯಕರ ನಡುವೆ ನಡೆದ ಸಭೆಯಲ್ಲಿ ಏರ್ಪಟ್ಟ ಧನಾತ್ಮಕ ಒಮ್ಮತವನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಉಭಯ ದೇಶಗಳ ಸೈನಿಕರು ಆರಂಭಿಸಿದ್ದಾರೆ ಎಂದು ಚೀನಾ ಇಂದು ಹೇಳಿದೆ.
ವಾಸ್ತವಿಕ ನಿಯಂತ್ರಣ ರೇಖೆಯ ಎರಡೂ ಕಡೆಗಳಿಂದ ಸೈನಿಕರು ತಮ್ಮ ಹಿಂದಿನ ನೆಲೆಗಳಿಗೆ ಹಿಂದೆ ಸರಿಯುತ್ತಿರುವ ಕುರಿತ ವರದಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್, ರೇಖೆಯುದ್ದಕ್ಕೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡೂ ಕಡೆಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದರು.
ಇತ್ತೀಚೆಗೆ ಭಾರತ ಮತ್ತು ಚೀನಾಗಳ ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಪರಿಣಾಮಕಾರಿ ಸಂವಹನವನ್ನು ನಡೆಸಲಾಯಿತು ಹಾಗೂ ಧನಾತ್ಮಕ ಒಮ್ಮತಕ್ಕೆ ಬರಲಾಯಿತು ಎಂದು ಅವರು ನುಡಿದರು.
ಉಭಯ ಬಣಗಳು ಗಡಿಯಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವುದಕ್ಕಾಗಿ ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಧಾರದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದರು.





