ಜಾರ್ಜ್ ಫ್ಲಾಯ್ಡ್ ಅಂತ್ಯ ಸಂಸ್ಕಾರ

ಹ್ಯೂಸ್ಟನ್, ಜೂ. 10: ಪೊಲೀಸ್ ಬಂಧನದ ವೇಳೆ ಸಾವಿಗೀಡಾಗಿರುವ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ರ ಅಂತ್ಯಸಂಸ್ಕಾರ ಬುಧವಾರ ನಡೆಯಿತು. ಓರ್ವ ಸಾಮಾನ್ಯ ಸಹೋದರನಾಗಿದ್ದ ಅವರು ಬೃಹತ್ ಚಳವಳಿಯೊಂದಕ್ಕೆ ಮೂಲಕಾರಣರಾದರು ಎಂದು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಲಾಯಿತು.
ಮೇ 25ರಂದು ಅವರನ್ನು ಬಂಧಿಸುವ ವೇಳೆ, ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳ ತೊಡಿಸಿ ಅವರನ್ನು ನೆಲಕ್ಕೆ ಕೆಡವಿ ಅವರ ಕುತ್ತಿಗೆಯ ಮೇಲೆ ಮೊಣಕಾಲಿನಿಂದ ಕುಳಿತಿದ್ದರು. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ, ಸ್ವಲ್ಪ ಪಟ್ಟು ಸಡಿಲಿಸಿ ಎಂಬುದಾಗಿ ಫ್ಲಾಯ್ಡ್ ಗೋಗರೆದಿದ್ದರೂ ಪೊಲೀಸರು ಅದನ್ನು ಲೆಕ್ಕಿಸಿರಲಿಲ್ಲ. ಕೆಲವು ನಿಮಿಷಗಳ ಬಳಿಕ ಫ್ಲಾಯ್ಡ್ ಶವವಾಗಿದ್ದರು. ಅವರ ಸಾವಿನ ಬೆನ್ನಿಗೇ ಅಮೆರಿಕದಾದ್ಯಂತ ಪೊಲೀಸ್ ದೌರ್ಜನ್ಯ ಮತ್ತು ಜನಾಂಗೀಯ ಅಸಮಾನತೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು.
ಫ್ಲಾಯ್ಡ್ ಚಿಕ್ಕಂದಿನಲ್ಲಿ ವಾಸಿಸಿದ್ದ ಹ್ಯೂಸ್ಟನ್‌ನ ಚರ್ಚೊಂದರಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು. ಅಮೆರಿಕದ ಎಲ್ಲ ಪ್ರಮುಖ ಟೆಲಿವಿಶನ್ ಚಾನೆಲ್‌ಗಳು ಅದನ್ನು ನೇರಪ್ರಸಾರದಲ್ಲಿ ತೋರಿಸಿದವು. ಅವರ ಸಾವಿನ ಕುರಿತ ಆಕ್ರೋಶ ಮತ್ತು ದುಃಖವನ್ನು ದೇಶದ ಒಂದು ಮೈಲಿಗಲ್ಲನ್ನಾಗಿ ಪರಿವರ್ತಿಸುವಂತೆ ಅವರ ಕುಟುಂಬ ಸದಸ್ಯರು, ಧರ್ಮಗುರುಗಳು ಮತ್ತು ರಾಜಕಾರಣಿಗಳು ಅಮೆರಿಕನ್ನರಿಗೆ ಕರೆ ನೀಡಿದರು.
ಮಿನಪೊಲಿಸ್ ನಗರದಲ್ಲಿ 46 ವರ್ಷದ ಕರಿಯ ವ್ಯಕ್ತಿಯ ಸಾವು ಸಂಭವಿಸಿದ ಬಳಿಕ, ಎರಡು ವಾರಗಳ ಕಾಲ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ.
ಫ್ಲಾಯ್ಡಾ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ವಿರುದ್ಧ ಕೊಲೆ ಆರೋಪ ಹೊರಿಸ ಬಂಧಿಸಲಾಗಿದೆ. ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.







