ದೇಶದಲ್ಲಿ 8 ಸಾವಿರ ದಾಟಿದ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ
ಹೊಸದಿಲ್ಲಿ, ಜೂ.11: ದೇಶದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಾವಿನ ಸಂಖ್ಯೆ 359ರ ಗಡಿ ದಾಟಿದೆ. ಬುಧವಾರ ದೇಶದಲ್ಲಿ 359 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾಂಕ್ರಾಮಿಕದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 8,105ನ್ನು ತಲುಪಿದೆ.
ಅಂತೆಯೇ ದೇಶದಲ್ಲಿ ಒಂದೇ ದಿನ 10,911 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 2,87,025ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಒಂದೇ ದಿನ 10 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಬುಧವಾರ ಗರಿಷ್ಠ ಸೋಂಕು ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ವರದಿಯಾಗಿವೆ. ಮುಂಬೈನಲ್ಲಿ 97 ಮಂದಿ ಸೇರಿದಂತೆ ಒಂದೇ ದಿನ 149 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ದಿನದ ಗರಿಷ್ಠ ಪ್ರಕರಣ (3,254)ಗಳು ಬುಧವಾರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 94,041ಕ್ಕೇರಿದೆ. ಪುಣೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,394 ಆಗಿದ್ದು, ಮೃತಪಟ್ಟವರ ಸಂಖ್ಯೆ 156ಕ್ಕೇರಿದೆ.
ತೆಲಂಗಾಣದಲ್ಲಿ ಬುಧವಾರ 191 ಹೊಸ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ ನಾಲ್ಕುಸಾವಿರದ ಗಡಿ ದಾಟಿದೆ. 8 ಮಂದಿ ರಾಜ್ಯದಲ್ಲಿ ಜೀವ ಕಳೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 156ಕ್ಕೇರಿದೆ.