ಸ್ವಂತ ಖರ್ಚಿನಲ್ಲಿ 175 ಕನ್ನಡಿಗರನ್ನು ತಾಯ್ನಾಡಿಗೆ ಕಳಿಸಿದ ಯುವ ಉದ್ಯಮಿಗಳಿಗೆ ಪ್ರಶಂಸೆಯ ಮಹಾಪೂರ
ಅಲ್ತಾಫ್ ಉಳ್ಳಾಲ, ಬಶೀರ್ ಸಾಗರ್‌ಗೆ ಗಣ್ಯರಿಂದ ಅಭಿನಂದನೆ

ಮಂಗಳೂರು, ಜೂ.11: ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ 175 ಮಂದಿ ಅನಿವಾಸಿ ಕನ್ನಡಿಗರನ್ನು ಸ್ವಂತ ಖರ್ಚಿನಿಂದ ತಾಯ್ನಡಿಗೆ ಕಳುಹಿಸಿಕೊಟ್ಟ ದಮಾಮ್‌ನ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ ಮತ್ತು ಬಶೀರ್ ಸಾಗರ್‌ರ ಮಾನವೀಯ ಸ್ಪಂದನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಯುವ ಉದ್ಯಮಿಗಳ ಕೊಡುಗೆಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ ಪೈಕಿ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ‘ವಾರ್ತಾಭಾರತಿ’ ಜೊತೆ ಹಂಚಿಕೊಂಡ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಲಾಗಿದೆ.
*ಇದು ತುಂಬಾ ಒಳ್ಳೆಯ ಕೆಲಸ. ಇದನ್ನು ಕೆಲಸ ಎಂದು ಹೇಳುವ ಬದಲು ಸೇವೆ ಎಂದರೂ ತಪ್ಪಾಗಲಾರದು. ಕಳೆದ ಎರಡು ವಾರಗಳಿಂದ ಅಲ್ತಾಫ್ ಉಳ್ಳಾಲ ಮತ್ತು ಬಶೀರ್ ಸಾಗರ್ ಮತ್ತಿತರರು ನನ್ನ ಜೊತೆ ನಿಕಟ ಸಂಪರ್ಕದಲ್ಲಿದ್ದರು. ನಾನು ಕೂಡ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಗಲ್ಫ್ ರಾಷ್ಟ್ರಗಳಲ್ಲಿ ಇನ್ನೂ ಲಕ್ಷಾಂತರ ಮಂದಿ ಅನಿವಾಸಿ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರನ್ನೆಲ್ಲಾ ಕರೆತರಲು ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಸರಕಾರದ ಪ್ರಯತ್ನಕ್ಕೆ ಇಂತಹ ನಿಸ್ವಾರ್ಥ ಸಮಾಜಸೇವಕರ ಸಹಕಾರ ನಮಗೆ ಅತ್ಯಗತ್ಯವಾಗಿದೆ. ಅಲ್ತಾಫ್ ಉಳ್ಳಾಲ-ಬಶೀರ್ ಸಾಗರ್‌ಗೆ ಜಿಲ್ಲೆಯ ಜನತೆಯ ಪರವಾಗಿ ನನ್ನ ಅಭಿನಂದನೆಗಳು.
-ನಳಿನ್ ಕುಮಾರ್ ಕಟೀಲು
ಸಂಸದರು, ದ.ಕ.ಲೋಕಸಭಾ ಕ್ಷೇತ್ರ
*ಈ ಇಬ್ಬರು ಯುವ ಉದ್ಯಮಿಗಳು ತುಳುನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ತುಳುನಾಡಿನ ಯುವಕರು ಎಂತಹ ಸೇವೆ ಮಾಡಬಲ್ಲರು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಇವರ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ಶ್ಲಾಘನೀಯ. ವಿದೇಶದಲ್ಲಿ ಇನ್ನೂ ಸಾಕಷ್ಟು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ನೆರವಿಗೆ ಸರಕಾರ ಸದಾ ಸಿದ್ಧವಾಗಿದೆ. ಸರಕಾರದ ಜೊತೆ ಇಂತಹ ಸಮಾಜಮುಖಿ ಉದ್ಯಮಿಗಳು ಕೈ ಜೋಡಿಸಿರುವುದು ಇತರರಿಗೆ ಮಾದರಿಯಾಗಿದೆ.
-ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ
*ಇಂತಹ ಸಂದಿಗ್ಧ ಕಾಲದಲ್ಲಿ ಯಾವುದೇ ಸ್ವಾರ್ಥ-ಲಾಭವಿಲ್ಲದೆ ಸಮಾಜಮುಖಿ ಸೇವೆಗೈದ ಅಲ್ತಾಫ್ ಉಳ್ಳಾಲ ಮತ್ತು ಬಶೀರ್ ಸಾಗರ್‌ಗೆ ನನ್ನ ಕ್ಷೇತ್ರದವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ಈ ವಿಮಾನದಲ್ಲಿ ಸಾಕೋ ಕಂಪೆನಿಗೆ ಸೇರಿದವರು ಯಾರೂ ಇರಲಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ. ಮಾನವೀಯತೆ, ಮನುಷ್ಯತ್ವ ಸತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಬೇಕಿಲ್ಲ. ಈ ಯುವ ಉದ್ಯಮಿಗಳಿಬ್ಬರೂ ಜಾತಿ, ಧರ್ಮ ನೋಡದೆ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರು ಎಂಬ ನೆಲೆಯಲ್ಲಿ ಸೇವೆಗೈದಿರುವುದು ಪ್ರಶಂಸನೀಯ. ಸರಕಾರ ಇನ್ನಾದರೂ ಕಣ್ಣು ತೆರೆಯಬೇಕು ಮತ್ತು ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಪ್ರಯತ್ನಿಸಬೇಕು. ಅಷ್ಟೇ ಅಲ್ಲ, ಕೆಲಸ ಕಳೆದುಕೊಂಡು ಬಂದ ಅನಿವಾಸಿ ಕನ್ನಡಿಗರ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸಬೇಕು. ಇನ್ನೂ ಲಕ್ಷಾಂತರ ಮಂದಿ ಅನಿವಾಸಿ ಕನ್ನಡಿಗರು ವಿದೇಶಗಳಲ್ಲಿ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಸಂಸದರು, ಶಾಸಕರು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿ ನೆರವು ದೊರಕಿಸಿಕೊಡಬೇಕು.
-ಯು.ಟಿ.ಖಾದರ್
ಮಾಜಿ ಸಚಿವರು, ಹಾಲಿ ಶಾಸಕರು
*ಅಲ್ತಾಫ್ ಉಳ್ಳಾಲ ಮತ್ತು ಬಶೀರ್ ಸಾಗರ್ ನಿಜಕ್ಕೂ ಸಮಾಜದ ನಿಸ್ವಾರ್ಥ ಸೇವಕರು. ಸಂಕಷ್ಟದಲ್ಲಿ ಸಿಲುಕಿದವರನ್ನು ತಾಯ್ನಾಡಿಗೆ ಸ್ವಂತ ಖರ್ಚಿನಿಂದ ಕಳಿಸಿದ್ದಲ್ಲದೆ, ಇಲ್ಲಿನ ಕ್ವಾರಂಟೈನ್ ವೆಚ್ಚವನ್ನು ಭರಿಸುವ ಉದಾರತೆ ಮೆರೆದಿದ್ದಾರೆ. ಜಾತಿ, ಮತ ನೋಡದೆ ಅವರು ಮಾಡಿದ ಸೇವೆಯನ್ನು ಎಲ್ಲರೂ ನೆನಪಿನಲ್ಲಿಡಬೇಕಿದೆ. ಈ ಯುವ ಉದ್ಯಮಿಗಳು ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತಡುವ ನಿಟ್ಟಿನಲ್ಲಿ ಸತತ 2 ವಾರಗಳಿಂದ ಪರಿಶ್ರಮ ಪಟ್ಟಿದ್ದಾರೆ. ಸರಕಾರದ ಜೊತೆ ಇಂತಹ ಉದ್ಯಮಿಗಳು ಕೈ ಜೋಡಿಸಬೇಕಿದೆ.
-ರಾಜೇಶ್ ನಾಯ್ಕ ಉಳೆಪ್ಪಾಡಿ
ಶಾಸಕರು, ಬಂಟ್ವಾಳ
*ಈ ಕೆಲಸವನ್ನು ಸರಕಾರ ಮಾಡಬೇಕಿತ್ತು. ಸರಕಾರ ಅನಿವಾಸಿ ಕನ್ನಡಿಗರ ದುಸ್ಥಿತಿಗೆ ಸ್ಪಂದಿಸದೆ ಇದ್ದಾಗ ಈ ಇಬ್ಬರು ಉದ್ಯಮಿಗಳು ಮಾಡಿದ ಸೇವೆಯನ್ನು ಬಣ್ಣಿಸಲು ಸಾಧ್ಯವಿಲ್ಲ. ಈ ವಿಮಾನದಲ್ಲಿ ತಮ್ಮ ಕಂಪೆನಿಯ ಒಬ್ಬನೇ ಒಬ್ಬ ಉದ್ಯೋಗಿ ಅಥವಾ ಅವರ ಕುಟುಂಬದ ಸದಸ್ಯರು ಇರಲಿಲ್ಲ. ಎಲ್ಲರೂ ಕಂಪೆನಿಗೆ ಹೊರತಾದವರು. ಬಹುಶಃ ವಿಶ್ವದಲ್ಲಿ ಇಂತಹದ್ದೊಂದು ನಿದರ್ಶನ ಬೇರೆ ಎಲ್ಲೂ ಆಗಿಲ್ಲವೋ ಏನೋ... ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಅನಿವಾಸಿ ಕನ್ನಡಿಗರ ಕೊಡುಗೆ ಅಷ್ಟಿಷ್ಟಲ್ಲ. ಅವರೀಗ ಸಂಕಷ್ಟದಲ್ಲಿದ್ದಾರೆ. ಸರಕಾರ ತಾವೇ ಮುಂದಾಗಿ ನೆರವು ನೀಡಬೇಕಿತ್ತು. ಕೇರಳ ಸರಕಾರವನ್ನು ನೋಡಿಯಾದರೂ ಪಾಠ ಕಲಿಯಬೇಕಿತ್ತು. ಇನ್ನಾದರು ಸರಕಾರ, ಸಂಸದರು ಎಚ್ಚೆತ್ತುಕೊಳ್ಳಬೇಕು. ಯುವ ಉದ್ಯಮಿಗಳಾದ ಅಲ್ತಾಫ್ ಉಳ್ಳಾಲ ಮತ್ತು ಬಶೀರ್ ಸಾಗರ್‌ರ ಸೇವೆಯನ್ನು ಸರಕಾರ ಗುರುತಿಸಬೇಕು.
-ಐವನ್ ಡಿಸೋಜ
ಶಾಸಕರು, ವಿಧಾನ ಪರಿಷತ್
*ಸಂಕಷ್ಟದಲ್ಲಿದ್ದ ಅನಿವಾಸಿ ಕನ್ನಡಿಗರು ಯಾರೂ ಅಂತ ಆ ಇಬ್ಬರು ಯುವ ಉದ್ಯಮಿಗಳಿಗೆ ಗೊತ್ತೇ ಇರಲಿಲ್ಲ. ಆದರೂ ಅವರು 175 ಮಂದಿಯನ್ನು ತಾಯ್ನಡಿಗೆ ಕಳುಹಿಸಿಕೊಟ್ಟಿದ್ದಾರೆ. ಆವಾಗ ಅವರ ಜಾತಿ ನೋಡಲಿಲ್ಲ, ಧರ್ಮ ನೋಡಲಿಲ್ಲ, ಊರು ನೋಡಲಿಲ್ಲ. ಹಿರಿಯರು, ಗರ್ಭಿಣಿಯರು, ಮಕ್ಕಳಿಗೆ ಆದ್ಯತೆ ನೀಡಿದರು. ಅವರ ಸೇವೆ ಅವಿಸ್ಮರಣೀಯ. ಇದರಿಂದ ಮುಸ್ಲಿಂ ಸಮುದಾಯ ಮಾತ್ರವಲ್ಲ, ದ.ಕ. ಜಿಲ್ಲೆಯ ಹೆಮ್ಮೆಯೂ ಹೆಚ್ಚಿದೆ.
-ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್
ಅಧ್ಯಕ್ಷರು, ಮುಸ್ಲಿಂ ಸೆಂಟ್ರಲ್ ಕಮಿಟಿ, ಮಂಗಳೂರು
*ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಆ ಇಬ್ಬರು ಯುವ ಉದ್ಯಮಿಗಳ ಪರಿಚಯ ಹೆಚ್ಚೇನೂ ಇಲ್ಲ. ಆದರೆ ಅವರು ಈ ಲಾಕ್‌ಡೌನ್-ಕೊರೋನ ಸಂದರ್ಭ ಮಾಡಿದ ಸೇವೆಯ ಸಂಪೂರ್ಣ ಪರಿಚಯ ನನಗೆ ಆಗಿದೆ. ಉಳ್ಳಾಲ ಆಸುಪಾಸಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಸದಾ ಧಾವಿಸುತ್ತಿದ್ದ ಅವರು ಸೌದಿಯಲ್ಲಿ ಸಂಕಷ್ಟಕ್ಕೀಡಾದ ಅನಿವಾಸಿ ಕನ್ನಡಿಗರನ್ನು ತಾಯ್ನಿಡಿಗೆ ಕಳುಹಿಸಿಕೊಡಲು ಪಟ್ಟ ಶ್ರಮವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ನಾಡಿನ, ಸಮುದಾಯದ ಹಿರಿಮೆಯನ್ನು ಹೆಚ್ಚಿಸಿದ ಅವರ ಒಂದರ್ಥದಲ್ಲಿ ಸರಕಾರದ ಕಣ್ಣು ತೆರೆಸಿದರು ಎನ್ನಬಹುದು.
-ಅಲ್ಹಾಜ್ ಯು.ಕೆ.ಕಣಚೂರು ಮೋನು
ಅಧ್ಯಕ್ಷರು, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ, ಮಂಗಳೂರು
ಅತಂತ್ರರಾಗಿದ್ದ ಕನ್ನಡಿಗರಿಗೆ ಸ್ವಂತ ಸೋದರರಂತೆ ಆಸರೆಯಾಗುವ ಮೂಲಕ ಸಾಕೋ ಸಂಸ್ಥೆಯ ಅಲ್ತಾಫ್ ಉಳ್ಳಾಲ್ ಹಾಗೂ ಬಶೀರ್ ಸಾಗರ್ ಬಹುದೊಡ್ಡ ಕೆಲಸ ಮಾಡಿದ್ದಾರೆ. ಈ ಮೂಲಕ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿದ್ದಾರೆ. ಅವರ ಈ ಸೇವೆಯನ್ನು ಕರಾವಳಿ ಕರ್ನಾಟಕ ಯಾವತ್ತೂ ಮರೆಯುವುದಿಲ್ಲ.
-ಮನ್ಸೂರ್ ಅಹ್ಮದ್ ಆಝಾದ್
ಅಧ್ಯಕ್ಷರು, ಹಿದಾಯ ಫೌಂಡೇಶನ್, ಮಂಗಳೂರು
ಅಲ್ತಾಫ್ ಉಳ್ಳಾಲ್ ಹಾಗೂ ಬಶೀರ್ ಸಾಗರ್ ಅವರ ಹೃದಯ ವೈಶಾಲ್ಯತೆ ನಮ್ಮಲ್ಲಿನ ಪ್ರತಿಯೊಬ್ಬ ಶ್ರೀಮಂತ ಉದ್ಯಮಿಗೂ ಬರಬೇಕು. ನಮ್ಮ ಸಂಪತ್ತು ಜನರ ಒಳಿತಿಗೆ ಬಳಕೆಯಾಗಬೇಕು ಎಂಬ ಮನಸ್ಸು ಬಹಳ ದೊಡ್ಡ ಮನಸ್ಸು. ಈ ಇಬ್ಬರು ಯುವ ಉದ್ಯಮಿಗಳು ಇಲ್ಲಿನ ಎಲ್ಲ ಉದ್ಯಮಿಗಳು ಹಾಗು ಸಮಾಜ ಸೇವಕರಿಗೆ ಮಾದರಿಯಾಗಲಿ.
-ಅಬ್ದುಲ್ ರವೂಫ್ ಪುತ್ತಿಗೆ
ಸ್ಥಾಪಕರು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಮಂಗಳೂರು







