ವಿಮಾನನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣ: ಶಂಕಿತ ಉಗ್ರ ಆದಿತ್ಯ ರಾವ್ನ ಆರೋಪ ಪಟ್ಟಿ ಕೋರ್ಟ್ಗೆ ಸಲ್ಲಿಕೆ

ಆದಿತ್ಯ ರಾವ್
ಮಂಗಳೂರು, ಜೂ.11: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ತಂಡವು ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದೆ.
ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಜನವರಿಯಲ್ಲಿ ಶಂಕಿತ ಉಗ್ರ ಆದಿತ್ಯ ರಾವ್ ಸ್ಫೋಟಕ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಯೂ ಆಗಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದ ತನಿಖಾ ಪ್ರಕ್ರಿಯೆಯು ಕಳೆದ ಎಪ್ರಿಲ್ನಲ್ಲೇ ಫೂರ್ಣಗೊಂಡಿತ್ತು. 700 ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದ್ದು, ಅದನ್ನು ಜಿಲ್ಲಾಧಿಕಾರಿ ಅನುಮತಿ ಪಡೆದು ರಾಜ್ಯ ಸರಕಾರದ ಅನುಮತಿಗಾಗಿ ಕಳುಹಿಸಲಾಗಿತ್ತು. ಇದೀಗ ರಾಜ್ಯ ಸರಕಾರದ ಗೃಹ ಇಲಾಖೆಯ ಕಾರ್ಯದರ್ಶಿಯಿಂದ ಪೂರ್ವಾನುಮತಿ ಪತ್ರ ಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿಯೂ ಆಗಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.
ಸ್ಫೋಟಕ ಇರಿಸಿದ್ದು ಖಚಿತ!
ಶಂಕಿತ ಉಗ್ರ ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ-Unlawful Activities (Prevention) Act) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಶಂಕಿತ ಉಗ್ರ ಆದಿತ್ಯ ರಾವ್ ದುಷ್ಕೃತ್ಯ ಎಸಗಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇರಿಸಿದ್ದನು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಎಫ್ ಎಸ್ಎಲ್ ವರದಿಯಲ್ಲೂ ಸಾಬೀತು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿ ಕಂಡು ಬಂದ ಶಂಕಾಸ್ಪದ ವಸ್ತುಗಳು ಸ್ಫೋಟಕಗಳೇ ಆಗಿವೆ ಎನ್ನುವುದು ಎಫ್ ಎಸ್ಎಲ್ ಟೆಸ್ಟ್ನಿಂದ ಸಾಬೀತಾಗಿದೆ ಎಂಬಿತ್ಯಾದಿ ಪ್ರಮುಖ ಸಂಗತಿಗಳು ಆರೋಪ ಪಟ್ಟಿಯಲ್ಲಿವೆ ಎಂದು ತನಿಖಾಧಿಕಾರಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.
ಏನಿದು ಪ್ರಕರಣ ?
ಶಂಕಿತ ಉಗ್ರ ಆದಿತ್ಯ ರಾವ್ 2020ರ ಜ.20ರಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ನ ಟಿಕೆಟ್ ಕೌಂಟರ್ ಬಳಿ ಪ್ರಯಾಣಿಕರು ಕುಳಿತು ಕೊಳ್ಳುವ ಕುರ್ಚಿಯಲ್ಲಿ ಸ್ಫೋಟಕಗಳು ಇರುವ ಬ್ಯಾಗ್ ಇರಿಸಿ ಬಳಿಕ ಪಾರ್ಕಿಂಗ್ ಪ್ರದೇಶದಲ್ಲಿದ್ದ ಆಟೋ ರಿಕ್ಷಾ ಏರಿ ಪರಾರಿಯಾಗಿದ್ದನು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಬ್ಯಾಗ್ನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಜ್ಞರಿಂದ ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ಸ್ಫೋಟಕಗಳಿರುವುದು ಪತ್ತೆಯಾಗಿತ್ತು. ಅದನ್ನು ಬಳಿಕ ಕೆಂಜಾರಿನ ವಿಶಾಲವಾದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬಾಂಬ್ ಪತ್ತೆ ದಳದ ತಜ್ಞರ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿತ್ತು.
ಬೆಂಗಳೂರಲ್ಲಿ ಶರಣಾಗಿದ್ದ
ಸ್ಫೋಟಕ ಇರಿಸಿದ ಬಳಿಕ ಶಂಕಿತ ಉಗ್ರ ಆದಿತ್ಯ ರಾವ್ ಬೆಂಗಳೂರಿಗೆ ತೆರಳಿ ಜ.22ರಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದನು. ಆತನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಮಂಗಳೂರು ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ ಆತನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು. ಆತನನ್ನು ತನಿಖೆಗೆ ಒಳ ಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮಂಗಳೂರು ಪೊಲೀಸರು ಪುನಃ ಪೊಲೀಸ್ ಕಸ್ಟಡಿಗೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದರು. ಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಕೊರೋನದಿಂದಾಗಿ ಬ್ರೈನ್ ಮ್ಯಾಪಿಂಗ್ ಬಾಕಿ
ಶಂಕಿತ ಉಗ್ರ ಆದಿತ್ಯ ರಾವ್ನ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಕೊರೋನ ಲಾಕ್ಡೌನ್ ಪ್ರಯುಕ್ತ ಬಾಕಿ ಉಳಿದಿದೆ. ಬ್ರೈನ್ ಮ್ಯಾಪಿಂಗ್ ನಡೆಸುವ ಬಗ್ಗೆ ನ್ಯಾಯಾಲಯದ ಅನುಮತಿ ಪಡೆಯಲಾಗಿದ್ದು, ಲಾಕ್ಡೌನ್ ಸಂಪೂರ್ಣ ತೆರವಾದ ಬಳಿಕ ಆತನನ್ನು ಬೆಂಗಳೂರಿಗೆ ಕರೆದೊಯ್ದು ಈ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತನಿಖಾಧಿಕಾರಿ ಎಸಿಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.







