ಚಿಕ್ಕಮಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಸೋಂಕು ದೃಢ

ಚಿಕ್ಕಮಗಳೂರು, ಜೂ.11: ಇತ್ತೀಚೆಗೆ ಪಾಸಿಟಿವ್ ಬಂದಿದ್ದ 16 ಕೊರೋನ ಸೋಂಕಿತರು ಗುಣಮುಖರಾಗಿ ಕೊರೋನ ಸೋಂಕು ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಗುರುವಾರ ವರದಿಯಾಗಿದೆ. 15 ವರ್ಷದ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಲ್ಲಿ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಕೆ.ದಾಸರಹಳ್ಳಿ ನಿವಾಸಿಯಾಗಿರುವ 15 ವರ್ಷದ ಎಸೆಸೆಲ್ಸಿ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯನ್ನು ಬುಧವಾರ ರಾತ್ರಿಯೇ ಚಿಕ್ಕಮಗಳೂರು ನಗರದ ಕೋವಿಡ್-19 ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕಗಳಾದ ಸುಮಾರು 55 ಮಂದಿಯನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ವಿದ್ಯಾರ್ಥಿಯ ಮನೆ ಸೇರಿದಂತೆ ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ.
ವಿದ್ಯಾರ್ಥಿಯಲ್ಲಿ ಕೊರೋನ ಪಾಸಿಟಿವ್ ಇರುವುದು ಪತ್ತೆಯಾದಾಗಿನಿಂದ ಕೆ.ದಾಸರಹಳ್ಳಿ ಸೇರಿದಂತೆ ಇಡೀ ಕಡೂರು ತಾಲೂಕಿನ ಜನರು ಆತಂಕಕ್ಕೊಳಗಾಗಿದ್ದಾರೆ. ವಿದ್ಯಾರ್ಥಿಗೆ ಸೋಂಕು ಹೇಗೆ ಬಂತೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ವಿದ್ಯಾರ್ಥಿಯ ಟ್ರಾವೆಲ್ ಹಿಸ್ಟರಿ ಪತ್ತೆಗಾಗಿ ಜಿಲ್ಲಾಡಳಿತ ಪ್ರತ್ಯೇಕ ತಂಡಗಳನ್ನು ನೇಮಕ ಮಾಡಿದೆ. ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕಗಳಾದ 55 ಮಂದಿಯ ರಕ್ತ ಹಾಗೂ ಗಂಟಲ ದ್ರವವನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೇ 19ರಂದು ಮೊದಲ ಬಾರಿಗೆ ಕೊರೋನ ಸೋಂಕಿತರು ಪತ್ತೆಯಾಗಿದ್ದು, ಮೇ 19ರಿಂದ ಮೇ 29ರವರೆಗೆ ಒಟ್ಟು 16 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದರು. ಸೋಂಕಿತರೆಲ್ಲರೂ ಮಹಾರಾಷ್ಟ್ರ, ದಿಲ್ಲಿಯಿಂದ ಜಿಲ್ಲೆಗೆ ಆಗಮಿಸಿದ್ದ ಪ್ರಯಾಣಿಕರಾಗಿದ್ದು, ಎಲ್ಲರನ್ನೂ ನಗರದ ಕೊರೋನ ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
ಈ ಸೋಂಕಿತರೆಲ್ಲರೂ ಗುಣಮುಖರಾಗಿದ್ದರಿಂದ ಜಿಲ್ಲಾಡಳಿತ ಎಲ್ಲರನ್ನೂ ಬಿಡುಗಡೆ ಮಾಡಿತ್ತು. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ವಾರಗಳ ಬಳಿಕ ಇದೀಗ ಕಡೂರು ತಾಲೂಕಿನಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಯಲ್ಲಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಈ ಪಾಸಿಟಿವ್ ಪ್ರಕರಣದಿಂದಾಗಿ ಸೋಂಕು ಮುಕ್ತ ಜಿಲ್ಲೆಯಾಗಿದ್ದ ಚಿಕ್ಕಮಗಳೂರು ಮತ್ತೆ ಕೊರೋನ ಸೋಂಕಿನ ಕಾರಣದಿಂದ ಸುದ್ದಿಯಾಗಿದೆ. ಸೋಂಕು ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಸೋಂಕಿತರು ಪತ್ತೆಯಾಗುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.







