ಉಡುಪಿ ಜಿಲ್ಲೆಯಲ್ಲಿ ಮತ್ತೆ 22 ಕೊರೋನ ಪಾಸಿಟಿವ್ ದೃಢ

ಉಡುಪಿ, ಜೂ.11: ಸತತ ಎರಡು ದಿನ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೇ ‘ಶೂನ್ಯ’ ಸಂಪಾದಿಸಿದ್ದ ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೆ 22 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿತರ ಒಟ್ಟು ಸಂಖ್ಯೆ ಈಗ 968ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಆದರೆ ಇಂದು ಬಂದಿರುವ 22 ಪ್ರಕರಣಗಳು ಜೂ.4-5ರಂದೇ ಪಾಸಿಟಿವ್ ಆಗಿ ಬಂದಿದ್ದು, ತಾಂತ್ರಿಕ ಕಾರಣದಿಂದ ರಾಜ್ಯ ಆರೋಗ್ಯ ಇಲಾಖೆ ಅದನ್ನು ಪ್ರಕಟಿಸದೇ ಇಂದು ತನ್ನ ಪಟ್ಟಿಯಲ್ಲಿ ಸೇರಿಸಿರುವುದರಿಂದ, ಜೂ.11ರ ಉಡುಪಿಯ ಕೊರೋನ ಸೋಂಕಿತರ ಪಟ್ಟಿಗೆ ಸೇರುತ್ತಿದೆ. ಆದರೆ ಎಲ್ಲಾ 22 ಮಂದಿಯನ್ನು ಅದೇ ದಿನದಂದು ಕೋವಿಡ್-19 ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆ ಗಳಿಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಒಟ್ಟು 968 ಪಾಸಿಟಿವ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 796 ಪಾಸಿಟಿವ್ ಪ್ರಕರಣವಿರುವ ಕಲಬುರಗಿ ಎರಡನೇ, 735 ಪ್ರಕರಣಗಳೊಂದಿಗೆ ಯಾದಗಿರಿ ಮೂರನೇ ಹಾಗೂ 561 ಪ್ರಕರಣಗಳೊಂದಿಗೆ ಬೆಂಗಳೂರು ನಗರ ನಾಲ್ಕನೇ ಸ್ಥಾನಗಳಲ್ಲಿ ಮುಂದುವರಿದಿವೆ.
ಇಂದು ಸೋಂಕಿತರ ಪಟ್ಟಿಯಲ್ಲಿರುವ 22 ಮಂದಿಯಲ್ಲಿ 20 ಮಂದಿ ಮಹಾರಾಷ್ಟ್ರ ಮುಂಬೈಯಿಂದ ಬಂದವರಾದರೆ, ಉಳಿದಿಬ್ಬರು ಕೊಲ್ಲೂರು ಪಿಎಚ್‌ಸಿಯ ಆರೋಗ್ಯ ಕಾರ್ಯಕರ್ತೆಯರು. 23 ಮತ್ತು 30 ವರ್ಷದ ಇವರಿಬ್ಬರು ಕೊಲ್ಲೂರು ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಅಲ್ಲಿ ಅವರು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದೆಂದು ಡಾ.ಸೂಡ ತಿಳಿಸಿದ್ದಾರೆ.
ಗುರುವಾರದ ಸೋಂಕಿತರಲ್ಲಿ 11 ಮಂದಿ ಪುರುಷರು, 9 ಮಂದಿ ಮಹಿಳೆ ಯರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರಲ್ಲಿ ಕುಂದಾಪುರದ ಐವರು, ಕಾರ್ಕಳದ ಆರು ಮಂದಿ, ಬೈಂದೂರಿನ ಎಂಟು ಮಂದಿ, ಹೆಬ್ರಿಯ ಇಬ್ಬರು ಹಾಗೂ ಉಡುಪಿಯ ಒಬ್ಬರು ಸೇರಿದ್ದಾರೆ.
91 ಮಂದಿ ಬಿಡುಗಡೆ: ಗುರುವಾರ ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ 91 ಮಂದಿ ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆ ಗಳಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಕುಂದಾಪುರ ಆಸ್ಪತ್ರೆಯಿಂದ 38 ಮಂದಿ, ಕೊಲ್ಲೂರು ಕೇಂದ್ರದಿಂದ 45 ಮಂದಿ ಹಾಗೂ ಉದ್ಯಾವರ ಎಸ್‌ಡಿಎಂ ಆಸ್ಪತ್ರೆಯಿಂದ ಎಂಟು ಮಂದಿ ಗುಣಮುಖರಾಗಿ ಇಂದು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 550 ಪಾಸಿಟಿವ್ ಬಂದ ವ್ಯಕ್ತಿಗಳು ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲೀಗ ಇರುವ ಸಕ್ರಿಯ ಪ್ರಕರಣಗಳು 417 ಆಗಿದೆ ಎಂದು ಡಾ.ಸೂಡ ವಿವರಿಸಿದರು.
67 ಸ್ಯಾಂಪಲ್ ನೆಗೆಟಿವ್: ಗುರುವಾರ ಉಡುಪಿಯಲ್ಲಿ 22 ಪಾಸಿಟಿವ್ ಪ್ರಕರಣಗಳು ಬಂದಿದ್ದರೂ, ನಿನ್ನೆ ಪರೀಕ್ಷೆಗೆ ಕಳುಹಿಸಿದ 122 ಸ್ಯಾಂಪಲ್‌ಗಳಲ್ಲಿ 67 ಗಂಟಲುದ್ರವ ಮಾದರಿಗಳ ವರದಿ ನೆಗೆಟಿವ್ ಆಗಿ ಬಂದಿವೆ. ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ 15ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಒಬ್ಬರು ಕೋವಿಡ್ ಸಂಪರ್ಕಿತರಾದರೆ, ನಾಲ್ವರು ಶೀತಜ್ವರದಿಂದ ಬಳಲುವ ವರು ಹಾಗೂ 10 ಮಂದಿ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರ ಮಾದರಿ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳು 12,695. ಇಂದು ಸಂಜೆಯವರೆಗೆ ಒಟ್ಟು 12,647ರ ವರದಿ ಬಂದಿವೆ. ಇದರಲ್ಲಿ 11,679 ನೆಗೆಟಿವ್ ಆಗಿದ್ದರೆ, ಒಟ್ಟು 968 ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿವೆ. ಇನ್ನು ಬಾಕಿ ಉಳಿದ ಒಟ್ಟು 48 ಸ್ಯಾಂಪಲ್‌ಗಳ ವರದಿ ನಾಳೆ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದವರು ಹೇಳಿದರು.
ಐಸೋಲೇಷನ್ ವಾರ್ಡಿಗೆ 16 ಮಂದಿ: ಗುರುವಾರ ರೋಗದ ಗುಣ ಲಕ್ಷಣದೊಂದಿಗೆ 10 ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆ ಯರು ಸೇರಿ ಒಟ್ಟು 16 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯವರು ಏಳು ಮಂದಿ ಹಾಗೂ ಶೀತಜ್ವರದಿಂದ ಬಾಧಿತರಾದ 8 ಮಂದಿ ಸೇರಿದ್ದಾರೆ.
ಇಂದು ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಆರು ಮಂದಿ ಬಿಡುಗಡೆಗೊಂಡಿದ್ದು, 80 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 42 ಮಂದಿ ಮಂಗಳವಾರ ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5335 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4687 ಮಂದಿ (ಇಂದು 97) 28 ದಿನಗಳ ನಿಗಾವಣೆ ಹಾಗೂ 4851 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಈಗಲೂ 403 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 379 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.
ಚೇತರಿಕೆ: ಮುಂಬೈಯಿಂದ ಬಂದು ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು, ಬಳಿಕ ಮನೆಗೆ ಕಳುಹಿಸಲ್ಪಟ್ಟ ಬೈಂದೂರಿನ 47ರ ಹರೆಯ ವ್ಯಕ್ತಿ, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಗಾಗಿ ಗಂಭೀರ ಸ್ಥಿತಿಯಲ್ಲಿ ಕಳೆದ ಶನಿವಾರದಿಂದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದು, ಇಂದು ಅವರ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಆದರೆ ಈಗಲೂ ಐಸಿಯುನಲ್ಲಿ ಆಮ್ಲಜನಕವನ್ನು ನೀಡಲಾಗುತ್ತಿದೆ. ಅವರು ಅಪಾಯದಿಂದ ಾರಾಗಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.
ಇನ್ನೂ 106 ಮಂದಿ ಬಿಡುಗಡೆ
ಜಿಲ್ಲೆಯಲ್ಲಿ ಪಾಸಿಟಿವ್ ಬಂದವರಲ್ಲಿ ಈವರೆಗಿನ 550 ಮಂದಿಯಲ್ಲದೇ ಇನ್ನೂ 106 ಸೋಂಕಿತರು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು, ಅವರ ಎರಡು ಸ್ಯಾಂಪಲ್‌ಗಳು ನೆಗೆಟಿವ್ ಆಗಿ ಬಂದಿವೆ. ಹೀಗಾಗಿ ಅವರನ್ನು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಇದರಿಂದ ನಾಳೆಯ ವೇಳೆಗೆ ಒಟ್ಟು 658 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಗೊಳ್ಳಲಿದ್ದು, ಆ ಬಳಿಕ ಕೇವಲ 308 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಉಳಿಯಲಿದೆ ಎಂದು ಜಿಲ್ಲಾಧಿಕಾರಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.







