ದ.ಕ. ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೋನ : ಎಂಟು ಮಂದಿ ಸೋಂಕಿನಿಂದ ಗುಣಮುಖ

ಮಂಗಳೂರು, ಜೂ.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಂಟು ಮಂದಿ ಸೋಂಕಿನಿಂದ ಗುಣಮುಖ ಹೊಂದಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 224ಕ್ಕೆ ಏರಿಕೆಯಾಗಿದೆ.
ಜೂ.1ರಂದು ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದ 33 ವರ್ಷದ ಯುವಕನನ್ನು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬಳಿಕ ಅವರು ಬೆಳ್ತಂಗಡಿಗೆ ತೆರಳಿದ್ದರು. ಅವರ ಗಂಟಲ ದ್ರವ ಮಾದರಿ ವರದಿಯಲ್ಲಿ ಸೋಂಕು ಪತ್ತೆಯಾಗಿದ್ದು, ವೆನ್ಲಾಕ್‌ಗೆ ದಾಖಲಿಸಲಾಗಿದೆ.
4186ನೇ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 45 ವರ್ಷದ ಮಹಿಳೆಯನ್ನು ಮನೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಇವರ ವರದಿಯು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವೆನ್ಲಾಕ್‌ಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಎಂಟು ಮಂದಿ ಡಿಸ್ಚಾರ್ಜ್: ಕೊರೋನ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಗುರುವಾರ ಮತ್ತೆ ಬಾಲಕ ಸಹಿತ ಎಂಟು (15 ವರ್ಷದ ಬಾಲಕ, ಆರು ಮಂದಿ ಪುರುಷರು, 60 ವರ್ಷದ ಮಹಿಳೆ) ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇದುವರೆಗೆ 125 ಮಂದಿ ಗುಣಮುಖರಾದಂತಾಗಿದೆ. ಸದ್ಯ 92 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





