ಉಡುಪಿಯಲ್ಲಿ ಭಾರೀ ಮಳೆ

ಉಡುಪಿ, ಜೂ.11: ಜಿಲ್ಲೆಗೆ ಕಾಲಿರಿಸಿದ ಬಳಿಕ ಕೆಲವು ದಿನ ವಿರಳವಾಗಿದ್ದ ಮುಂಗಾರು, ನಿನ್ನೆ ಸಂಜೆಯಿಂದ ಬಿರುಸುಗೊಂಡಿದ್ದು, ಇಂದು ಮುಂಜಾನೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 93.60ಮಿ.ಮೀ. ಮಳೆ ಸುರಿದಿದೆ. ಆದರೆ ಜಿಲ್ಲೆಯಲ್ಲಿ ಈ ದಿನದ ಸಾಮಾನ್ಯ ಮಳೆ 30.20 ಮಿ.ಮೀ. ಆಗಿದೆ.
ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬಿದ್ದಿರುವುದು ಕುಂದಾಪುರದಲ್ಲಿ ಅಲ್ಲಿ 107.4 ಮಿ.ಮೀ. ಮಳೆಯಾದರೆ, ಉಡುಪಿಯಲ್ಲಿ 86.6ಮಿ.ಮೀ. ಹಾಗೂ ಕಾರ್ಕಳದಲ್ಲಿ 79.5ಮಿ.ಮೀ. ಮಳೆ ಸುರಿದೆ.
ಬುಧವಾರ ರಾತ್ರಿ ಭಾರೀ ಮಳೆಯೊಂದಿಗೆ ಗುಡುಗು-ಸಿಡಿಲು ಸಹ ಇದ್ದು, ಬೈಂದೂರಿನಲ್ಲಿ ಕೆಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾ ಗಿದೆ. ಬೈಂದೂರು ತಾಲೂಕು ಶಿರೂರು ಗ್ರಾಮದ ಅದಮಕ್ಕಿ ನಿವಾಸಿಯಾದ ಅಕ್ಕಯ್ಯ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಬಿರುಕು ಬಿಟ್ಟಿದೆಯಲ್ಲದೇ ಮನೆಯ ಮೀಟರ್ ಬೋರ್ಡ್ ಹಾಗೂ ವಿದ್ಯುತ್ ವಯರಿಂಗ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ 50 ಸಾವಿರ ರೂ.ಗಳಿಗೂ ಅಧಿಕ ನಷ್ಟವಾದ ಬಗ್ಗೆ ಅಂದಾಜಿಸಲಾಗಿದೆ.
ಅದೇ ರೀತಿ ನೀಲಾ ಫೆರ್ನಾಂಡೀಸ್ ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು, ಇಲ್ಲೂ 50 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.





