ಅಮೆರಿಕ: ಕೊಲಂಬಸ್ ಪ್ರತಿಮೆಯ ಶಿರಚ್ಛೇದನ

ಫೋಟೊ ಕೃಪೆ: twitter.com
ಬೋಸ್ಟನ್ (ಅಮೆರಿಕ), ಜೂ. 11: ಅಮೆರಿಕದ ಮ್ಯಾಸಚೂಸಿಟ್ಸ್ ರಾಜ್ಯದ ರಾಜಧಾನಿ ಬೋಸ್ಟನ್ ನಗರದಲ್ಲಿದ್ದ ಕ್ರಿಸ್ಟೋಫರ್ ಕೊಲಂಬಸ್ನ ಪ್ರತಿಮೆಯ ತಲೆ ಕಡಿಯಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ವಿರೊಧಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ವಸಾಹತುಶಾಹಿಗಳು ಮತ್ತು ಗುಲಾಮರ ವ್ಯಾಪಾರಿಗಳನ್ನು ಸ್ಮರಿಸುವ ಪ್ರತಿಮೆಗಳನ್ನು ತೆರವುಗೊಳಿಸಬೇಕೆಂಬ ಕರೆಗಳೂ ಪ್ರಬಲವಾಗಿ ಕೇಳಿಬರುತ್ತಿವೆ. ಈ ಬೆಳವಣಿಗೆಯ ನಡುವೆಯೇ, ಅಮೆರಿಕ ಖಂಡವನ್ನು ಕಂಡುಹಿಡಿದ ಕೊಲಂಬಸ್ನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಮಯಾಮಿ ನಗರದಲ್ಲೂ ಕೊಲಂಬಸ್ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ ಹಾಗೂ ವರ್ಜೀನಿಯದ ರಿಚ್ಮಂಡ್ನಲ್ಲಿದ್ದ ಇನ್ನೊಂದು ವಿಗ್ರಹವನ್ನು ಎಳೆದುಕೊಂಡು ಹೋಗಿ ಕೆರೆಗೆ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
ಮಿನಪೊಲಿಸ್ ನಗರದಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಬಿಳಿಯ ಪೊಲೀಸ್ ಅಧಿಕಾರಿಯೋರ್ವನ ಕೈಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅಮೆರಿಕ ಹಾಗೂ ಜಗತ್ತಿನಾದ್ಯಂತ ನಡೆದ ಬೃಹತ್ ಪ್ರತಿಭಟನೆಗಳ ಬಳಿಕ ಜನಾಂಗೀಯ ತಾರತಮ್ಯವನ್ನು ವೈಭವೀಕರಿಸುವ ಸ್ಮಾರಕಗಳನ್ನು ತೆರವುಗೊಳಿಸಬೇಕೆಂಬ ಕೂಗು ಅಮೆರಿಕದಲ್ಲಿ ಬಲಗೊಳ್ಳುತ್ತಿದೆ.
ಇಟಲಿಯ ಅನ್ವೇಷಕ ಕೊಲಂಬಸ್ನನ್ನು ಶಾಲಾ ಪಠ್ಯಪುಸ್ತಕಗಳು ಹಿಂದಿನಿಂದಲೂ ‘ಹೊಸ ಜಗತ್ತಿನ ಅನ್ವೇಷಕ’ ಎಂಬುದಾಗಿ ಕೊಂಡಾಡುತ್ತಿವೆ. ಆದರೆ, ಆತನು ಅಮೆರಿಕ ಖಂಡಗಳಲ್ಲಿ ಹಲವು ವರ್ಷಗಳ ಕಾಲ ಬುಡಕಟ್ಟು ಗುಂಪುಗಳ ಜನಾಂಗೀಯ ನಿರ್ಮೂಲನದಲ್ಲಿ ತೊಡಗಿದ್ದನು ಎಂಬ ಆರೋಪಗಳೂ ಇವೆ.







