ಎಸಿಬಿ ದಾಳಿ ಪ್ರಕರಣ: ನಾಲ್ವರು ಅಧಿಕಾರಿಗಳ ಮನೆಯಲ್ಲಿ ಚಿನ್ನಾಭರಣ, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ

ಬೆಂಗಳೂರು, ಜೂ.11: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ನಾಲ್ವರು ಸರಕಾರಿ ಅಧಿಕಾರಿಗಳ ಮನೆ- ಕಚೇರಿ ಸೇರಿದಂತೆ ರಾಜ್ಯದೆಲ್ಲೆಡೆ 14 ಕಡೆಗಳಲ್ಲಿ ದಾಳಿ ನಡೆಸಿದ್ದ ಪ್ರಕರಣ ಸಂಬಂಧ ಕೋಟ್ಯಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಲಾಗಿದೆ ಎಂದು ಎಸಿಬಿ ತಿಳಿಸಿದೆ.
* ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್. ಸತೀಶ್ ಕುಮಾರ್ ಅವರ ಬಳಿ ಬೆಂಗಳೂರು ಮೈಸೂರಿನ ಸರಸ್ವತಿಪುರದ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 5 ನಿವೇಶನಗಳು, 1.17 ಕೆಜಿ ಚಿನ್ನ, 7.290 ಕೆ.ಜಿ. ಬೆಳ್ಳಿ, ಎರಡು ಕಾರು, 2.92 ಲಕ್ಷ ನಗದು ಪತ್ತೆಯಾಗಿದೆ.
* ಕೋಲಾರ ಜಿಲ್ಲೆ ಶ್ರೀನಿವಾಸಪುರ ವಲಯ ಅರಣ್ಯ ಅಧಿಕಾರಿ, ಎನ್.ರಾಮಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಿದಾಗ ಕೋಲಾರದಲ್ಲಿ 1 ಮತ್ತು ಬೆಂಗಳೂರಿನಲ್ಲಿ 2 ವಾಸದ ಮನೆಗಳು, ಬಂಗಾರಪೇಟೆಯ ಚಿನ್ನಕಾಮನಹಳ್ಳಿಯಲ್ಲಿ 1.23 ಎಕರೆ ಕೃಷಿ ಜಮೀನು, 877 ಗ್ರಾಂ ಚಿನ್ನ, 1.58 ಕೆ.ಜಿ ಬೆಳ್ಳಿ, ಕಾರು, ವಿವಿಧ ಬ್ಯಾಂಕ್‍ಗಳಲ್ಲಿ 8.22 ಲಕ್ಷ ನಗದು, 2.27 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿರುವುದು ಬೆಳಕಿಗೆ ಬಂದಿದೆ.
* ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯನಿರ್ವಾಹಕ ಅಭಿಯಂತರ ಗೋಪಶೆಟ್ಟಿ ಮಲ್ಲಿಕಾರ್ಜುನ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ರಾಯಚೂರಿನಲ್ಲಿ 3 ಹಾಗೂ ಬೆಂಗಳೂರಿನಲ್ಲಿ ಒಂದು ವಾಸದ ಮನೆ, ರಾಯಚೂರಿನಲ್ಲಿ 2 ಫ್ಲಾಟ್ ಮತ್ತು ಕೊಪ್ಪಳದಲ್ಲಿ 2 ನಿವೇಶನ, 1.394 ಕೆಜಿ ಚಿನ್ನ, 10.395 ಕೆಜಿ ಬೆಳ್ಳಿ, 74 ಸಾವಿರ ನಗದು, ರಾಯಚೂರಿನಲ್ಲಿ ಪತ್ನಿ ಹೆಸರಿನಲ್ಲಿ ಒಂದು ಪೆಟ್ರೋಲ್ ಬಂಕ್, 2 ಟ್ರ್ಯಾಕ್ಟರ್ ಶೋ ರೂಂ, 8.38 ಎಕರೆ ಕೃಷಿ ಜಮೀನು, 1 ಬೈಕ್, 1.4 ಕೋಟಿ ಗೃಹಯೋಪಯೋಗಿ ವಸ್ತುಗಳು ಪತ್ತೆಯಾಗಿವೆ.
* ಬಾಗಲಕೋಟೆ ಕ್ಯಾಂಪ್ ಆಲಮಟ್ಟಿ ಬೀಳಗಿ ಸಹಾಯಕ ಉಪವಿಭಾಗ ರಾಘಪ್ಪ ಲಾಲಪ್ಪ ಲಮಾಣಿ, ಬಾಗಲಕೋಟೆಯಲ್ಲಿ 2 ವಾಸದ ಮನೆಗಳು, 1 ಕಾರು, 1 ಬೈಕ್, 334 ಗ್ರಾಂ ಚಿನ್ನ, 1.277 ಕೆ.ಜಿ ಬೆಳ್ಳಿ ವಿವಿಧ ಬ್ಯಾಂಕ್‍ಗಳಲ್ಲಿ 2.88 ಲಕ್ಷ ನಗದು ಹಾಗೂ 5 ಲಕ್ಷ ಮೌಲ್ಯದ ಗೃಹಯೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಸದ್ಯ ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದ್ದು, ಸರಕಾರಿ ನೌಕರರು ಹೊಂದಿರುವ ಆಸ್ತಿ ಹಾಗೂ ಬ್ಯಾಂಕ್ ಲಾಕರ್ ಗಳ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸಿಬಿ ತಿಳಿಸಿದೆ.







