ಕೊರೋನ ಸಂಕಷ್ಟಕ್ಕೆ ಉಡುಪಿಯಲ್ಲಿ ಮತ್ತೊಂದು ಬಲಿ !

ಉಡುಪಿ, ಜೂ.11: ಉಡುಪಿಯಲ್ಲಿ ಕೊರೋನ ಆರ್ಥಿಕ ಸಂಕಷ್ಟಕ್ಕೆ ಮತ್ತೊಂದು ಬಲಿಯಾಗಿದೆ. ಇಲ್ಲಿನ ಕನ್ನರ್ಪಾಡಿ ನಿವಾಸಿ ರಘುನಾಥ್ ಸೇರಿಗಾರ್ (55) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಟೈಲರ್ ಆಗಿರುವ ರಘುನಾಥ್ ಕಳೆದ ಎರಡು ಮೂರು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಹೀಗಾಗಿ ಆರ್ಥಿಕವಾಗಿ ಸಾಕಷ್ಟು ಜರ್ಝರಿತರಾಗಿದ್ದರು. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಮರುದಿನ ಬೆಳಗ್ಗೆ 5:30ರ ಸುಮಾರಿಗೆ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದರು. ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದು, ಇಂದು ಬೆಳಗ್ಗೆ ಅವರ ಮಾವ ಸೂರಪ್ಪ ಸೇರಿಗಾರ್ ಮನೆಯ ಬಳಿಯ ಬಾವಿ ಯಲ್ಲಿ ರಘುನಾಥ್‌ರ ಮೃತದೇಹ ತೇಲುತ್ತಿರುವುದು ಪತ್ತೆಯಾಯಿತು.
ಉದ್ಯೋಗ ನಷ್ಟ ಹಾಗೂ ಆರ್ಥಿಕ ಸಂಕಷ್ಟದಿಂದ ಅವರು ಬಾವಿಗೆ ಹಾರಿ ಅತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕಿಸಲಾಗಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಆಗಲಿರುವ ಇವರು ಲಾಕ್‌ಡೌನ್ ಕಾರಣದಿಂದಾಗಿ ಕೆಲಸವಿಲ್ಲದೇ ನೊಂದಿದ್ದರು. ಇದರಿಂದ ಖಿನ್ನತೆಗೆ ಜಾರಿದ್ದ ರಘುನಾಥ್ ಇಂತಹದ್ದೊಂದು ನಿರ್ಧಾರಕ್ಕೆ ಬಂದಿರಬೇಕೆಂದು ಹೇಳಲಾಗಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





