ಭಾಷಣವನ್ನು ತಪ್ಪಾಗಿ ನಿರೂಪಿಸಿ ಹರ್ಷ ಮಂದರ್‌ಗೆ ನಿಂದನೆ: ನಿವೃತ್ತ ಅಧಿಕಾರಿಗಳ ತಂಡದ ಟೀಕೆ
ಹೊಸದಿಲ್ಲಿ, ಜೂ.11: ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಡಿಸೆಂಬರ್‌ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮಾಡಿದ ಭಾಷಣವನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು 95 ನಿವೃತ್ತ ಸರಕಾರಿ ಅಧಿಕಾರಿಗಳ ತಂಡ ‘ಕಾನ್‌ಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್’ ಟೀಕಿಸಿದೆ. ಹರ್ಷ ಮಂದರ್ ಮಾಡಿದ್ದ ಭಾಷಣಕ್ಕೆ ದ್ವೇಷಭಾಷಣದ ರೂಪು ನೀಡಲಾಗಿದೆ. ಅಲ್ಲದೆ ತಮ್ಮ ಭಾಷಣದ ಮೂಲಕ ಹಿಂಸೆಗೆ ಪ್ರಚೋದನೆ ಮತ್ತು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂಬ ತಪ್ಪು ಆರೋಪ ಹೊರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿವಿ ಆವರಣದೊಳಗೆ ನುಗ್ಗಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಇದನ್ನು ಖಂಡಿಸಿ ಡಿಸೆಂಬರ್ 16ರಂದು ವಿವಿಯಲ್ಲಿ ಭಾಷಣ ಮಾಡಿದ್ದ ಹರ್ಷ ಮಂದರ್, ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಸುಪ್ರೀಂಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿ ಮಂದರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದರು.
ಅಫಿದಾವಿತ್‌ನೊಂದಿಗೆ ಪೊಲೀಸರು ಸಲ್ಲಿಸಿದ್ದ ವೀಡಿಯೊ ದೃಶ್ಯವೊಂದರಲ್ಲಿ ಮಂದರ್ ‘ತನಗೆ ಸುಪ್ರೀಂಕೋರ್ಟ್‌ನ ಮೇಲೆ ವಿಶ್ವಾಸವಿಲ್ಲ. ಬೀದಿಯಲ್ಲಿಯೇ ನೈಜ ನ್ಯಾಯ ಸಿಗುತ್ತದೆ ಎಂದು ಹೇಳಿಕೆ ನೀಡಿರುವುದನ್ನು ಸುಪ್ರೀಂ ಗಮನಕ್ಕೆ ತರಲಾಗಿತ್ತು. ಈ ಮಧ್ಯೆ, ಬಿಜೆಪಿ ನಾಯಕರು ದಿಲ್ಲಿಯಲ್ಲಿ ಮಾಡಿದ್ದ ದ್ವೇಷಭಾಷಣದ ತರುವಾಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂದರ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಭಾರತದ ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆ, ನೀವು ಸುಪ್ರೀಂಕೋರ್ಟ್‌ನ ವಿರುದ್ಧ ಹೇಳಿಕೆ ನೀಡಿದ್ದೀರಿ. ಆದ್ದರಿಂದ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದಿದ್ದರು. ದಿಲ್ಲಿ ಪೊಲೀಸರು ತಿರುಚಿದ ವೀಡಿಯೊ ದೃಶ್ಯಾವಳಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. ಪೂರ್ಣ ವೀಡಿಯೋವನ್ನು ಸಲ್ಲಿಸಿದರೆ ಆಗ ಹರ್ಷ ಮಂದರ್ ತಪ್ಪಿತಸ್ತನಲ್ಲ ಎಂದು ಸ್ಪಷ್ಟವಾಗುತ್ತದೆ. ಭಾಷಣವನ್ನು ಸನ್ನಿವೇಶಕ್ಕೆ ತಕ್ಕಂತೆ ಅನುಕ್ರಮವಾಗಿ ಮತ್ತು ಪೂರ್ಣವಾಗಿ ಓದಬೇಕು. ಆಗ ಭಾಷಣದ ಸಂದೇಶ ಅರ್ಥವಾಗುತ್ತದೆ ಎಂದು ‘ಕಾನ್‌ಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್’ನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜಸ್ತಾನದ ಮಾಜಿ ಪ್ರಧಾನ ಕಾರ್ಯದರ್ಶಿ ಸಲಾದುದ್ದೀನ್ ಅಹ್ಮದ್, ನಿವೃತ್ತ ಸಂಪುಟ ಕಾರ್ಯದರ್ಶಿ ವಿ ಬಾಲಚಂದ್ರನ್, ಪೋರ್ಚುಗಲ್‌ನಲ್ಲಿ ಈ ಹಿಂದೆ ರಾಯಭಾರಿಯಾಗಿದ್ದ ಮಧು ಭದೂರಿ, ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಕೇಶವ್ ದೇಸಿರಾಜು ಸಹಿತ 95 ನಿವೃತ್ತ ಅಧಿಕಾರಿಗಳು ಹೇಳಿಕೆಗೆ ಸಹಿ ಹಾಕಿದ್ದಾರೆ.