ಬಂಟ್ವಾಳ ಎಪಿಎಂಸಿ ಅಧ್ಯಕ್ಷರಾಗಿ ನೇಮಿರಾಜ ರೈ, ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಆಯ್ಕೆ

ಬಂಟ್ವಾಳ, ಜೂ. 11: ಬಂಟ್ವಾಳ ತಾಲೂಕು ಕೃಷಿ ಉತ್ಷನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿ ಕಾಂಗ್ರೆಸ್' ಕೈ'ಯಿಂದ ಜಾರಿ ಬಿಜೆಪಿ ತೆಕ್ಕೆಗೆ ಬಂದಿದೆ. ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನೇಮಿರಾಜ ರೈ ಬೋಳಂತೂರು,ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ .ಅವರು ಗುರುವಾರ ಎಪಿಎಂಸಿ ಕಚೇರಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್ ಸಹಕರಿಸಿದರು. ಕಳೆದ 40 ತಿಂಗಳು ಕಾಂಗ್ರೆಸ್ ಆಡಳಿತದಲ್ಲಿದ್ದ ಬಂಟ್ವಾಳ ಎಪಿಎಂಸಿಯ ಕೊನೆಯ 20 ತಿಂಗಳ ಅವಧಿ ಬಿಜೆಪಿಗೆ ಒಲಿದಿದೆ. ಇಲ್ಲಿ ಬಿಜೆಪಿ 7 ಸದಸ್ಯ ಬಲ ಹೊಂದಿದ್ದರೆ, ಕಾಂಗ್ರೆಸ್ 6 ಸದಸ್ಯ ಬಲ ಹೊಂದಿದೆ.
ಕಳೆದ 40 ತಿಂಗಳು ಮೂವರು ನಾಮನಿರ್ದೇಶಿತ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ನ ಪದ್ಮನಾಭರೈ ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಇದೀಗ ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಮೂವರು ನಾಮ ನಿರ್ದೇಶಿತ ಸದಸ್ಯರು ಆಯ್ಕೆಯಾಗಿದ್ದು, ಪರಿಣಾಮ ಬಿಜೆಪಿ ಮರಳಿ ಅಧಿಕಾರದ ಗದ್ದುಗೆಗೇರಿದೆ.
ನಾಮನಿರ್ದೇಶಿತ ಸದಸ್ಯರ್ಯಾರು: ತನಿಯಪ್ಪ ಗೌಡ ಮಾಣಿ,ವಸಂತ ಅಣ್ಣಳಿಕೆ ಹಾಗೂ ರೇಣುಕಾ ವಿಜಯ ರೈ ಅವರು ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆ ಬಂಟ್ವಾಳ, ಉಪಾಧ್ಯಕ್ಷತೆ ಮಂಗಳೂರಿಗೆ: ಎಪಿಎಂಸಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ನೇಮಿರಾಜ ರೈ ಅವರು ಬಂಟ್ವಾಳ ಕ್ಷೇತ್ರದ ಬೋಳಂತೂರಿನವರಾಗಿದ್ದು, ಈ ಹಿಂದೆ 2013-14ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿದ್ದು, ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಉಪಾಧ್ಯಕ್ಷ ಸ್ಥಾನ ಬಂಟ್ವಾಳ ತಾ.ನ ಮಂಗಳೂರು ವಿಧಾನ ಕ್ಷೇತ್ರಕ್ಕೊಳಪಟ್ಟ ತುಂಬೆ ವಾರ್ಡ್ ನ ವಿಠಲ ಸಾಲಿಯಾನ್ ಗೆ ಒಲಿದಿದ್ದು, ಇವರು ಇದೇ ಮೊದಲಿಗೆ ಎಪಿಎಂಸಿಗೆ ಚುನಾಯಿತರಾದವರಾಗಿದ್ದಾರೆ.







