ರಾಜಧಾನಿ ಬೆಂಗಳೂರಿನ ಹಲವು ಆರಕ್ಷಕರಿಗೆ ಕೊರೋನ: ಪೊಲೀಸ್ ವಲಯದಲ್ಲಿ ಆತಂಕ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.11: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚುತ್ತಿರುವ ಬೆನ್ನಲ್ಲೇ ಜನರನ್ನು ರಕ್ಷಣೆ ಮಾಡಬೇಕಾದ ಆರಕ್ಷಕರಿಗೆ ಕೊರೋನ ಸೋಂಕು ತಗಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಇಲ್ಲಿವರೆಗೂ 7 ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳಿಗೆ ಕೊರೋನ ಸೋಂಕು ತಗುಲಿದ್ದರೆ, ಕೆಲ ಬಂಧಿತ ಆರೋಪಿಗಳಿಗೆ ಸೋಂಕು ಧೃಡವಾಗಿದ್ದು ಪೊಲೀಸ್ ಸಿಬ್ಬಂದಿ ಆತಂಕ ಹೆಚ್ಚುವಂತೆ ಮಾಡಿದೆ.
ಇಲ್ಲಿನ ಬಂಡೇಪಾಳ್ಯ, ಜೆಜೆ ನಗರ, ಜೆಬಿ ನಗರ, ಫ್ರೇಜರ್ ಟೌನ್, ಚಾಮರಾಜ ಪೇಟೆ, ಸೋಲದೇವನಹಳ್ಳಿ ಪೊಲೀಸ್ ಠಾಣೆಗಳ ಪೊಲೀಸ್ ಪೇದೆಗಳಿಗೆ ಕೊರೋನ ಸೋಂಕು ತಗುಲಿದೆ. ಹೆಣ್ಣೂರು ಪೊಲೀಸ್ ಠಾಣೆಯ ಕೋರ್ಟ್ ಬೀಟ್ ಪೊಲೀಸ್, ಶಂಕರ್ ಪುರಂ ಪೊಲೀಸ್ ಪೇದೆಗೂ ಕೊರೋನ ಪಾಸಿಟಿವ್ ಬಂದಿರುವುದು ಪೊಲೀಸ್ ವಲಯದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಬಹುತೇಕ ಎಲ್ಲ ಪೊಲೀಸ್ ಠಾಣೆಗಳನ್ನು ಕೂಡ ಸ್ಯಾನಿಟೈಸ್ ಮಾಡಲಾಗಿದೆ. ಇದರ ಜೊತೆಗೆ ಕೊರೋನ ಸೋಂಕಿತ ಪೇದೆಗಳ ಮೊದಲ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಅವರನ್ನು ಕೋವಿಡ್-19 ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.





