ಕೊರೋನ ವೈರಸ್ : ಬ್ರಿಟನ್ ಹಿಂದಿಕ್ಕಿದ ಭಾರತ ಈಗ ವರ್ಲ್ಡ್ ನಂ.4
ಹೊಸದಿಲ್ಲಿ : ಅತ್ಯಧಿಕ ಕೊರೋನ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದೆ. ಗುರುವಾರ ಸಂಜೆ ವೇಳೆಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,95,772 ಆಗಿದ್ದು, 2.91 ಲಕ್ಷ ಪ್ರಕರಣಗಳು ದಾಖಲಾದ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿದಂತಾಗಿದೆ.
ಇದೀಗ ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ದೇಶಗಳಷ್ಟೇ ಭಾರತಕ್ಕಿಂತ ಹೆಚ್ಚು ಸಂಖ್ಯೆಯ ಸೋಂಕಿತರನ್ನು ಹೊಂದಿವೆ. ರಷ್ಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.93 ಲಕ್ಷ ಆಗಿದ್ದರೆ, ಬ್ರೆಝಿಲ್ನಲ್ಲಿ 7.72 ಲಕ್ಷ ಹಾಗೂ ಅಮೆರಿಕದಲ್ಲಿ 20 ಲಕ್ಷ ಮಂದಿಗೆ ಸೋಂಕು ತಗುಲಿದೆ.
ಮೇ 24ರಂದು ಭಾರತ ವಿಶ್ವದಲ್ಲಿ ಗರಿಷ್ಠ ಸೋಂಕಿತರನ್ನು ಹೊಂದಿದ ಅಗ್ರ 10 ರಾಷ್ಟ್ರಗಳ ಪೈಕಿ ಸ್ಥಾನ ಪಡೆದ ಬಳಿಕ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚುತ್ತಿದೆ. ಕೇವಲ 18 ದಿನಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ. ಅತಿಹೆಚ್ಚು ಬಾಧಿತವಾಗಿದ್ದ ಇಟೆಲಿ, ಸ್ಪೇನ್ ಹಾಗೂ ಚೀನಾವನ್ನು ಕೂಡಾ ಭಾರತ ಹಿಂದಿಕ್ಕಿದೆ.
ವಿಶ್ವದ ಅತಿ ಸುಧೀರ್ಘ ಲಾಕ್ಡೌನ್ ನಡುವೆಯೂ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಲಾಕ್ಡೌನ್ ಘೋಷಣೆಯಾದ ದಿನ ಅಂದರೆ ಮಾರ್ಚ್ 25ರಂದು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 500 ಇತ್ತು ಹಾಗೂ 10 ಮಂದಿ ಮೃತಪಟ್ಟಿದ್ದರು.
ಕಳೆದ ಕೆಲ ವಾರಗಳಲ್ಲಿ ಸೋಂಕು ಪ್ರಮಾಣ ಆಘಾತಕಾರಿಯಾಗಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 9996 ಪ್ರಕರಣಗಳು ದಾಖಲಾಗಿವೆ. ಅಂತೆಯೇ ಗುರುವಾರ ಒಂದೇ ದಿನ ಮೃತರ ಸಂಖ್ಯೆ 350ರಷ್ಟು ಹೆಚ್ಚಿದ್ದು, ಒಟ್ಟು ಸಾವಿನ ಸಂಖ್ಯೆ 8500ರ ಸನಿಹಕ್ಕೆ ಬಂದಿದೆ. ಈ ಪೈಕಿ ಮಹಾರಾಷ್ಟ್ರದಲ್ಲೇ 3483 ಸಾವು ಸಂಭವಿಸಿದೆ. ದೇಶದಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಪ್ರಕರಣಗಳು ಜೂನ್ನಲ್ಲೇ ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಸನಿಹಕ್ಕೆ ಬಂದಿದ್ದು, ಒಟ್ಟು 97648 ಪ್ರಕರಣಗಳು ಪತ್ತೆಯಾಗಿವೆ. ತಮಿಳುನಾಡು ಹಾಗೂ ದೆಹಲಿ ನಂತರದ ಸ್ಥಾನಗಳಲ್ಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 34687ಕ್ಕೇರಿದೆ.