ಭಾರತದಲ್ಲಿ ಮೊದಲ ಬಾರಿ ಒಂದೇ ದಿನ 10,000ಕ್ಕೂ ಅಧಿಕ ಹೊಸ ಕೊರೋನ ಪ್ರಕರಣ
![ಭಾರತದಲ್ಲಿ ಮೊದಲ ಬಾರಿ ಒಂದೇ ದಿನ 10,000ಕ್ಕೂ ಅಧಿಕ ಹೊಸ ಕೊರೋನ ಪ್ರಕರಣ ಭಾರತದಲ್ಲಿ ಮೊದಲ ಬಾರಿ ಒಂದೇ ದಿನ 10,000ಕ್ಕೂ ಅಧಿಕ ಹೊಸ ಕೊರೋನ ಪ್ರಕರಣ](https://www.varthabharati.in/sites/default/files/images/articles/2020/06/12/247038-1591943061.jpg)
ಹೊಸದಿಲ್ಲಿ, ಜೂ.12: ಭಾರತದಲ್ಲಿ ಇದೇ ಮೊದಲ ಬಾರಿ ಒಂದೇ ದಿನ 10,000ಕ್ಕೂ ಅಧಿಕ ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೇರಿದೆ. ಒಟ್ಟು 8,498 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 24 ಗಂಟೆ ಅವಧಿಯಲ್ಲಿ 396 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ.
ದೇಶದಲ್ಲಿ ಶುಕ್ರವಾರ ಬೆಳಗ್ಗೆ 8ರ ತನಕ ಕಳೆದ 24 ಗಂಟೆಗಳ ಅವಧಿಯಲ್ಲಿ 10,956 ಹೊಸ ಕೊರೋನ ವೈರಸ್ ಸೋಂಕುಗಳು ದಾಖಲಾಗಿವೆ.
ಭಾರತವು ಗುರುವಾರ ಅತ್ಯಧಿಕ ಕೋರೊನ ಸೋಂಕು ಪೀಡಿತ ದೇಶಗಳ ಪೈಕಿ ನಾಲ್ಕನೇ ಸ್ಥಾನಕ್ಕೇೀರಿದ್ದು, ಈ ಮೂಲಕ ಬ್ರಿಟನ್ನ್ನು ಹಿಂದಿಕ್ಕಿದೆ.
ಸತತ ಮೂರನೇ ದಿನವೂ ದೇಶದಲ್ಲಿ ಸಕ್ರಿಯ ನೊವೆಲ್ ಕೊರೋನ ವೈರಸ್ ಪ್ರಕರಣಗಿಂತ ಗುಣಮುಖರಾದವರ ಸಂಖ್ಯೆ ಅಧಿಕವಾಗಿದೆ. ಸಕ್ರಿಯ ಕೊರೋನ ವೈರಸ್ ಪ್ರಕರಣ 1,41,842 ರಷ್ಟಿದೆ. 1,47,194 ಜನರು ರೋಗದಿಂದ ಗುಣಮುಖರಾಗಿದ್ದಾರೆ. ಈ ತನಕ ಸುಮಾರು 49.47 ಶೇ. ರೋಗಿಗಳು ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.