ಕೊಕಾ ಕೋಲಾ, ಥಮ್ಸ್ ಅಪ್ ನಿಷೇಧಿಸಿ ಎಂದು ಅಪೀಲು ಸಲ್ಲಿಸಿದ ವ್ಯಕ್ತಿಗೇ ರೂ. 5 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್!
ಹೊಸದಿಲ್ಲಿ: ತಂಪು ಪಾನೀಯಗಳಾದ 'ಕೊಕಾ ಕೋಲಾ' ಮತ್ತು 'ಥಮ್ಸ್ ಅಪ್' ಮಾರಾಟ ನಿಷೇಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ವ್ಯಕ್ತಿಯೊಬ್ಬನ ಅಪೀಲನ್ನು ತಿರಸ್ಕರಿಸಿದ ನ್ಯಾಯಾಲಯ, ಈ ನಿರ್ದಿಷ್ಟ ವಿಷಯದ ಕುರಿತಂತೆ ಯಾವುದೇ ತಾಂತ್ರಿಕ ಜ್ಞಾನವಿಲ್ಲದೆ ಅಪೀಲು ಸಲ್ಲಿಸಿದ್ದಕ್ಕಾಗಿ ಆತನ ಮೇಲೆಯೇ ರೂ. 5 ಲಕ್ಷ ದಂಡ ವಿಧಿಸಿದೆ.
ಉಮೇದ್ ಸಿನ್ಹ್ ಪಿ ಚಾವ್ಡಾ ಎಂಬವರು ಸಲ್ಲಿಸಿದ ಅಪೀಲಿನಲ್ಲಿ ಈ ನಿರ್ದಿಷ್ಟ ಎರಡು ಬ್ರ್ಯಾಂಡ್ಗಳನ್ನು ಮಾತ್ರ ನಿಷೇಧಿಸಬೇಕೆಂದು ಏಕೆ ಕೋರಿದ್ದರೆಂದ ಸ್ಪಷ್ಟಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಚಾವ್ಡಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಆರೋಗ್ಯ ಕಾರಣಗಳನ್ನು ನೀಡಿ ಈ ಎರಡು ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಕೋರಿದ್ದರು.
ಕೊಕಾ ಕೋಲಾ ಮತ್ತು ಥಮ್ಸ್ ಅಪ್ ಆರೋಗ್ಯಕ್ಕೆ ಹೇಗೆ ಹಾನಿಕರವೆಂದು ಅರ್ಜಿದಾರರು ಸಾಬೀತುಪಡಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಅರ್ಜಿದಾರರು ತಾವೊಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಅವರು ಈ ವಿಷಯದ ಬಗ್ಗೆ ಯಾವುದೇ ತಾಂತ್ರಿಕ ಜ್ಞಾನ ಹೊಂದಿಲ್ಲ. ಅವರ ವಾದಕ್ಕೆ ಸಮರ್ಥನೆಯನ್ನೂ ಒದಗಿಸಿಲ್ಲ,'' ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಹೇಮಂತ್ ಗುಪ್ತಾ ಹಾಗೂ ಅಜಯ್ ರಸ್ತೋಗಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.
ಒಂದು ತಿಂಗಳೊಳಗೆ ರೂ. 5 ಲಕ್ಷವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿಯಿರಿಸಬೇಕು ಹಾಗೂ ಅದನ್ನು ಸುಪ್ರೀಂ ಕೋರ್ಟ್ ಅಡ್ವಕೇಟ್ಸ್ ಆನ್ ರೆಕಾಡ್ರ್ಸ್ ಅಸೋಸಿಯೇಶನ್ಗೆ ವಿತರಿಸಬೇಕು ಎಂದು ಹೇಳಿದೆ.