ಗುರುಪುರ ಸೇತುವೆ ಅವಧಿಗಿಂತ ಮೊದಲೇ ಪೂರ್ಣಗೊಂಡಿದೆ : ಕೋಟ ಶ್ರೀನಿವಾಸ ಪೂಜಾರಿ
ನೂತನ ಸೇತುವೆ ಉದ್ಘಾಟನೆ

ಮಂಗಳೂರು, ಜೂ.12: ಗುರುಪುರ ಸೇತುವೆಯ ಕಾಮಗಾರಿ ಕಾಲಾವಧಿಗಿಂತ ಮೊದಲೇ ಒಂದೇ ವರ್ಷದಲ್ಲಿ ಪೂರ್ಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುರುಪುರ ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ ಸುಮಾರು 39.42 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದರು.
ಈ ರೀತಿಯ ಕೆಲಸ ಗ್ರಾಮಸ್ವರಾಜ್ಯದ ಕಲ್ಪನೆಗೆ, ರಾಮರಾಜ್ಯದ ಕಲ್ಪನೆಗೆ ಪೂರಕವಾಗಿದೆ ಎಂದು ಕಾಮಗಾರಿ ಪೂರ್ಣಗೊಳಿಸಲು ಕಾರಣರಾದ ಸಂಸದರು, ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ತ್ವರಿತವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಕಳ - ಕುಲಶೇಖರ ನಡುವಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗು ವುದು. ಮಂಗಳೂರು -ಬೆಂಗಳೂರು ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹಿಂ, ತಾ.ಪಂ.ಸದಸ್ಯ ಸಚಿನ್ ಅಡಪ, ಮೂಡಾ ಅಧ್ಯಕ್ಷ ರವಿ ಶಂಕರ ಮಿಜಾರ್, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಭಟ್, ಇಂಜಿನಿಯರ್ ಗಳಾದ ಜಿ.ಎನ್.ಹೆಗಡೆ, ರಮೇಶ್, ಕೇಶವ ಮೂರ್ತಿ, ಕೀರ್ತಿ ಅಮೀನ್ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೊದಲಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರರಾದ ಮುಗ್ರೋಡಿ ಸುಧಾಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೊಸ ಸೇತುವೆ ಯೋಜನೆಯಲ್ಲಿ 25 ಮೀ. ಉದ್ದದ ಏಳು ಅಂಕಣಗಳಿವೆ. ಎರಡೂ ಕಡೆ ಸೇತುವೆಯ ಅಗಲ 16 ಮೀ. ಸೇತುವೆ ರಸ್ತೆ ಅಗಲ 11 ಮೀ., ಕಾಲುದಾರಿ ಅಗಲ 2.50 ಮೀ., ಫೈಲ್ ಫೌಂಡೇಶನ್, ಮೇಲ್ಕಟ್ಟಡಕ್ಕೆ ಪಿಎಸ್‌ಸಿ ಗರ್ಡರ್ ಬೀಮ್ ಮತ್ತು ಸ್ಪ್ಯಾಬ್, ಎರಡೂ ಕಡೆ ತಲಾ 500 ಮೀ. ಉದ್ದದ ಸಂಪರ್ಕ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಹಳೆ ಸೇತುವೆ 1920ರಲ್ಲಿ ನಿರ್ಮಾಣಗೊಂಡು ಸುಮಾರು 100ವರ್ಷಗಳ ಕಾಲ ಸಂದಿದೆ. ನೂತನ ಸೇತುವೆ ಫೆ. 21, 2019ರಲ್ಲಿ ಪ್ರಾರಂಭಗೊಂಡ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಜಗದೀಶ್ ಶೇಣವ ಕಾರ್ಯಕ್ರಮ ನಿರೂಪಿಸಿದರು.









