ವೈದ್ಯರಿಗೆ ವೇತನ ನೀಡದೇ ಇರುವ ಕುರಿತು ಕೇಂದ್ರಕ್ಕೆ ಸುಪ್ರೀಂ ತರಾಟೆ
"ಯುದ್ಧದಲ್ಲಿ ಯೋಧರನ್ನು ಅಸಂತುಷ್ಟಗೊಳಿಸಲು ಸಾಧ್ಯವಿಲ್ಲ"

ಹೊಸದಿಲ್ಲಿ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರಿಗೆ ವೇತನ ನೀಡದೇ ಇರುವುದು ಹಾಗೂ ಅವರಿಗೆ ಸೂಕ್ತ ವಸತಿ ಕಲ್ಪಿಸದೇ ಇರುವುದಕ್ಕೆ ಸರಕಾರವನ್ನು ಇಂದು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, "ಯುದ್ಧದ ಸಂದರ್ಭದಲ್ಲಿ ನೀವು ಸೈನಿಕರನ್ನು ಅಸಂತುಷ್ಟಗೊಳಿಸುವುದಿಲ್ಲ. ಬದಲಾಗಿ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ಸ್ವಲ್ಪ ಹೆಚ್ಚು ಹಣ ವಿನಿಯೋಗಿಸಿ ಅವರ ಸಮಸ್ಯೆ ಪರಿಹರಿಸಿ. ಕೊರೋನ ವಿರುದ್ಧದ ಈ ಯುದ್ಧದಲ್ಲಿ ಅತೃಪ್ತ ಯೋಧರನ್ನು ಹೊಂದಲು ಸಾಧ್ಯವಿಲ್ಲ,'' ಎಂದು ಹೇಳಿದೆ.
ಆರೋಗ್ಯ ಸೇವೆಯಲ್ಲಿ ನಿರತರಾದವರಿಗೆ ವೇತನ ಪಾವತಿ ಮಾಡದೇ ಇರುವ ವಿಚಾರಗಳಲ್ಲಿ ಕೋರ್ಟ್‍ಗಳನ್ನು ಶಾಮೀಲಾಗಿಸಬಾರದು, ಸರಕಾರವೇ ಅದನ್ನು ಇತ್ಯರ್ಥಪಡಿಸಬೇಕು ಎಂದು ಜಸ್ಟಿಸ್ ಅಶೋಕ್ ಭೂಷಣ್, ಎಸ್ ಕೆ ಕೌಲ್ ಹಾಗೂ ಎಂ ಆರ್ ಶಾ ಅವರ ಪೀಠ ಹೇಳಿದೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಂಚೂಣಿಯಲ್ಲಿರುವವರಿಗೆ ವೇತನ ನೀಡಲಾಗುತ್ತಿಲ್ಲ, ಅಥವಾ ಅವರ ವೇತನ ನೀಡಿಕೆಯಲ್ಲಿ ವಿಳಂಬ ಅಥವಾ ಕಡಿತವಾಗಿದೆ ಎಂಬ ಕುರಿತು ದೂರಿ ವೈದ್ಯರೊಬ್ಬರು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆಯನ್ನು ನಡೆಸುವ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
ವೈದ್ಯರಿಗೆ ವೇತನ ಪಾವತಿಯಾಗುತ್ತಿಲ್ಲ ಎಂಬ ಹಲವು ವರದಿಗಳಿವೆ. ವೈದ್ಯರು ಮುಷ್ಕರ ನಡೆಸಿದ ವರದಿಯನ್ನೂ ನೋಡಿದ್ದೇವೆ. ದಿಲ್ಲಿಯಲ್ಲಿ ಕೆಲ ವೈದ್ಯರುಗಳಿಗೆ ಮೂರು ತಿಂಗಳು ವೇತನ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿತಲ್ಲದೆ, "ನೀವು (ಕೇಂದ್ರ) ಇನ್ನೂ ಹೆಚ್ಚು ಮಾಡಬೇಕಿದೆ, ಅವರ ಸಮಸ್ಯೆ ಬಗೆಹರಿಸಿ,'' ಎಂದು ಹೇಳಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.







