ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್ ನಿಧನ

ಮಂಗಳೂರು, ಜೂ.12: ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್ (90) ಮುಂಬೈನಲ್ಲಿ ಇಂದು ನಿಧನರಾಗಿದ್ದಾರೆ.
ಮೂಲತ: ಸುರತ್ಕಲ್ ಹೊಸಬೆಟ್ಟುವಿನರಾಗಿದ್ದ ನ್ಯಾ. ಸುರೇಶ್ ಅವರು ಮುಂಬೈನಲ್ಲಿಯೇ ನೆಲೆಸಿದ್ದರು. ಸುರತ್ಕಲ್ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಪ್ರತಿ ವರ್ಷ ತಮ್ಮ ಹಿರಿಯರ ಮನೆಗೆ ಆಗಮಿಸುವ ಸಂದರ್ಭ ಸುರತ್ಕಲ್‌ನ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದರು.
ಸುರತ್ಕಲ್ ಹೊಸಬೆಟ್ಟುವಿನಲ್ಲಿ 1929ರ ಜುಲೈ 29ರಂದು ಜನಿಸಿದ್ದ ಹೊಸಬೆಟ್ಟು ಸುರೇಶ್ 1953ರಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಮಂಗಳೂರು ನಲ್ಲಿ ಬಿಎ ಪದವಿ ಮತ್ತು ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ಪಡೆದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಎಂ ಪದವಿ ಪಡೆದವರು.
1968ರಲ್ಲಿ ಗ್ರೇಟರ್ ಬಾಂಬೆ ಸಿಟಿ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1979ರಲ್ಲಿ ದ್ವಿತೀಯ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1980ರ ಜೂನ್ 23ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅವರು ಬಳಿಕ ಬಾಂಬೆ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿ ಪ್ರಾಕ್ಟೀಸು ಆರಂಭಿಸಿ, 1982ರಲ್ಲಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ ಪಡೆದಿದ್ದರು. 1986ರ ನವೆಂಬರ್ 21ರಂದು ಬಾಂಬೆ ಹೈಕೋಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ, 1987ರ ಜೂನ್ 12ರಂದು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1991ರ ಜುಲೈ 19ರಂದು ಅವರು ಹೈಕೋರ್ಟ್ ನಿಂದ ವೃತ್ತಿ ನಿವೃತ್ತಿ ಪಡೆದಿದ್ದರು.
ನ್ಯಾಯನಿಷ್ಠುರರಾಗಿದ್ದ ಅವರು, ಮಾನವ ಹಕ್ಕುಗಳ ಕುರಿತಂತೆ ಸಾಕಷ್ಟು ಕಾಳಜಿ ಹೊಂದಿದ್ದವರಾಗಿದ್ದರು. ಗುಜರಾತ್‌ನ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅವರು ಮತ್ತು ನ್ಯಾಯಮೂರ್ತಿ ಪಿ.ಬಿ. ಸಾವಂತ್‌ರವರನ್ನು ಒಳಗೊಂಡ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ನೇತೃತ್ವದ ಖಾಸಗಿ ಸಮಿತಿ (ಐಪಿಟಿ ಸತ್ಯಶೋಧನಾ ಸಮಿತಿ) ‘ಮಾನವೀಯತೆ ವಿರುದ್ಧದ ಅಪರಾಧ’ ಎಂದು ವರದಿಯನ್ನೂ ಸಲ್ಲಿಸಿತ್ತು.
ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಆಗಲಿದ್ದಾರೆ.
''ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದ ನ್ಯಾ. ಸುರೇಶ್ ಹೊಸಬೆಟ್ಟು ವಿದ್ಯಾದಾಯಿನಿಗೆ ಭೇಟಿ ನೀಡುವ ಸಂದರ್ಭ ಉಪನ್ಯಾಸವನ್ನೂ ನೀಡುತ್ತಿದ್ದರು. ‘‘ಆಲ್ ಹ್ಯೂಮನ್ ರೈಟ್ಸ್ ಆರ್ ಫಂಡಮೆಂಟಲ್ ರೈಟ್ಸ್’ ಎಂಬ ಕಾನೂನು ಪುಸ್ತಕವನ್ನೂ ಇವರು ಬರೆದಿದ್ದು, 2019ರ ನವೆಂಬರ್‌ನಲ್ಲಿ ವಿದ್ಯಾದಾಯಿನಿ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ಶಿಕ್ಷಣ ಸಂಸ್ಥೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದ ಅವರು, ದತ್ತಿ ನಿಧಿಯನ್ನೂ ಆರಂಭಿಸಿದ್ದರು''.
- ಪ್ರೊ. ಕೃಷ್ಣಮೂರ್ತಿ ಪಿ., ಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್







